ADVERTISEMENT

ಬಸವಣ್ಣನ ಬೃಹತ್ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 8:35 IST
Last Updated 8 ಏಪ್ರಿಲ್ 2012, 8:35 IST
ಬಸವಣ್ಣನ ಬೃಹತ್ ಪ್ರತಿಮೆ
ಬಸವಣ್ಣನ ಬೃಹತ್ ಪ್ರತಿಮೆ   

ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮಾನತೆಯ ಹರಿಕಾರ, ಕ್ರಾಂತಿಪುರುಷ ಬಸವಣ್ಣನವರ ಬೃಹತ್ ಪ್ರತಿಮೆಯ ಕಾರ್ಯ ಪೂರ್ಣಗೊಳ್ಳುವತ್ತ ಸಾಗಿದ್ದು ಅದಕ್ಕೆ ಬಣ್ಣ ಹಚ್ಚುವುದೊಂದೇ ಬಾಕಿ ಇದೆ. ಸಾಕಷ್ಟು ಎತ್ತರದ ಬೇರೆ ಬೇರೆ ಮೂರ್ತಿಗಳು ಅಲ್ಲಲ್ಲಿ ಇದ್ದರೂ ಬಸವಣ್ಣನವರಿಗೆ ಸಂಬಂಧಿಸಿದಂತೆ 108 ಅಡಿ ಎತ್ತರದ ಈ ಪ್ರತಿಮೆ ಮಾತ್ರ ಜಗತ್ತಿನಲ್ಲಿಯೇ ಅತಿ ಎತ್ತರದ್ದಾಗಿದೆ.

`ಕಲ್ಯಾಣ~ ಎನ್ನಲಾಗುತ್ತಿದ್ದ ಇಂದಿನ ಬಸವಕಲ್ಯಾಣ ಹಿಂದೆ ಅನೇಕ ರಾಜಮನೆತನಗಳ ರಾಜಧಾನಿಯಾಗಿ ಮೆರೆದಿತ್ತು. 12 ನೇ ಶತಮಾನದಲ್ಲಿ ಬಸವಾದಿ ಶರಣರು ನಿರ್ಮಿಸಿದ್ದ ವಿಶ್ವದ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ `ಅನುಭವ ಮಂಟಪ~ದಿಂದಾಗಿಯೂ ಈ ಸ್ಥಳಕ್ಕೆ ಕೀರ್ತಿ ಬಂತು. ಈಗ ಈ ಬೃಹತ್ ಪ್ರತಿಮೆಯಿಂದಾಗಿ ಕಿರೀಟದಲ್ಲಿ ಗರಿ ಮೂಡಿಸಿದಂತಾಗಿದ್ದು ಈ ಸ್ಥಳದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ಸಸ್ತಾಪುರ ರಸ್ತೆಯಲ್ಲಿ ಎತ್ತರವಾದ ಮತ್ತು ಸುಂದರವಾದ ಪರಿಸರದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. 10 ವರ್ಷಗಳ ಹಿಂದೆ ಇಲ್ಲಿ ಜಾಗ ಖರೀದಿಸಿದ ಕೂಡಲ ಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿಯವರು ಗುಡ್ಡದಲ್ಲಿ ಗವಿ ಕೊರೆಸಿ ಶರಣಗ್ರಾಮ, ಬಸವ ಮಂಟಪದಂತಹ ಮಹತ್ವದ ಸ್ಮಾರಕಗಳನ್ನು ನಿರ್ಮಿಸಿದ್ದಾರೆ.

ನಂತರ 2006 ರಲ್ಲಿ ಬಸವಣ್ಣನ ಮೂರ್ತಿಯ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಟ್ಟರು. ಇದರ ನಿರ್ಮಾಣಕ್ಕೆ ಕಬ್ಬಿಣದ ಸಲಾಕೆ ಮತ್ತು ಸಿಮೆಂಟ್ ಕಾಂಕ್ರಿಟ್ ಬಳಕೆಯಾಗಿದೆ. ಹತ್ತಾರು ಕೆಲಸಗಾರರು ರಾತ್ರಿಹಗಲೇನ್ನದೆ ನಿರಂತರವಾಗಿ ದುಡಿದಿದ್ದಾರೆ. ಈ ಕೆಲಸಕ್ಕೆ ಅಂದಾಜು 3 ಕೋಟಿ ರೂಪಾಯಿ ವೆಚ್ಚವಾಗಿದೆ. ಬರೀ ಬಣ್ಣ ಹಚ್ಚುವುದಕ್ಕೆ 12-15 ಲಕ್ಷ ರೂಪಾಯಿ ಖರ್ಚು ಬರುತ್ತಿದೆ ಎಂದು ಈ ಕಾರ್ಯದ ಉಸ್ತುವಾರಿ ವಹಿಸಿರುವ ಸ್ವತಃ ಎಂಜಿನಿಯರರಾದ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸುತ್ತಾರೆ.

ಅಭಯಹಸ್ತದ ಬಸವಣ್ಣ
ಕೆಳಗಡೆ 80 ಅಡಿ ಉದ್ದ ಮತ್ತು 65 ಅಡಿ ಅಗಲದ ದೊಡ್ಡ ಕೋಣೆ ನಿರ್ಮಿಸಿ ಪೀಠ ಮಾಡಿಕೊಳ್ಳಲಾಗಿದೆ. ಅದರ ಮೇಲೆ ಆಸೀನರಾದ ಅಭಯಹಸ್ತದ ಬಸವಣ್ಣನವರ ಪ್ರತಿಮೆ ರೂಪುಗೊಂಡಿದೆ. ಪೀಠದ ಕೊಣೆಯಲ್ಲಿ ಬಸವಣ್ಣನವರ ಜೀವನದ ಘಟನೆಗಳನ್ನು ಚಿತ್ರಿಸಲಾಗುತ್ತದೆ.  ಉಬ್ಬು ಶಿಲ್ಪಗಳನ್ನು ನಿರ್ಮಿಸಲಾಗುತ್ತದೆ. ಎದುರಿಗೆ ಮತ್ತು ಅಕ್ಕಪಕ್ಕದಲ್ಲಿ ಸುಂದರ ಉದ್ಯಾನವನ ನಿರ್ಮಿಸುವ ಯೋಜನೆ ಇದೆ ಎಂದೂ ಸ್ವಾಮೀಜಿ ಹೇಳುತ್ತಾರೆ.

ಈ ವರ್ಷ ಬಸವಜಯಂತಿಯ ಶತಮಾನೋತ್ಸವ ವಿಜೃಂಭಣೆಯಿಂದ ಆಚರಣೆಗೆ ನಾಡಿನ ಬಸವಭಕ್ತರು ಸಿದ್ಧತೆ ನಡೆಸಿದ್ದಾರೆ. ಇಂಥ ಸಂದರ್ಭದಲ್ಲಿ ಕೂಡಲಸಂಗಮ ಬಸವಧರ್ಮ ಪೀಠದಿಂದ ಇಂಥ ಮಹತ್ವದ ಕೊಡುಗೆ ನಾಡಿಗೆ ಸಮರ್ಪಿಸುತ್ತಿರುವುದು ದುಗ್ಧಶರ್ಕರಾಯೋಗ ಎಂದೇ ಹೇಳಬೇಕು. ಪ್ರತಿಮೆಯ ಕಾರ್ಯ ಪೂರ್ಣಗೊಳ್ಳಲು ಪ್ರಯತ್ನಿಸುವುದರ ಜತೆಗೆ ಮಹತ್ವದ ವ್ಯಕ್ತಿಗಳಿಂದ ಶೀಘ್ರ ಇದರ ಅನಾವರಣ ನಡೆಸಲು ಸದ್ದುಗದ್ದಲವಿಲ್ಲದೆ ಸಿದ್ಧತೆಯೂ ನಡೆದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.