ADVERTISEMENT

ಬಾವಿಯಲ್ಲಿ ನೀರಿಲ್ಲ: ಪೈಪ್‌ಲೈನ್ ಕಾಮಗಾರಿ!

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 8:45 IST
Last Updated 24 ಜೂನ್ 2012, 8:45 IST

ಬೀದರ್:  ಔರಾದ್ ತಾಲ್ಲೂಕಿನ ಚಿಕ್ಲಿ(ಯು) ಗ್ರಾಮದಲ್ಲಿ ಜಲ ನಿರ್ಮಲ ಯೋಜನೆಯಡಿ ತೋಡಲಾಗಿರುವ ಬಾವಿಯಲ್ಲಿ ನೀರಿಲ್ಲದಿದ್ದರೂ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಗ್ರಾಮದ ಸಮಾಜ ಸೇವಕ ಎಂ.ಡಿ. ಗುಲಾಂ ದಸ್ತಗೀರ್ ಆಪಾದಿಸಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಕಲ್ಪಿಸಲು ಯೋಜನೆಯಡಿ 1 ಕೋಟಿ 9 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸದ್ಯ ತೋಡಲಾಗಿರುವ ಬಾವಿಯಲ್ಲಿ ನೀರೇ ಇಲ್ಲ. ಆದರೂ ಸಾಕಷ್ಟು ನೀರಿದೆ ಎಂಬ ಕಾರಣ ನೀಡಿ ಪೈಪ್‌ಲೈನ್ ಹಾಕಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.

ಜೆಸಿಬಿ ಬಳಸಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಗ್ರಾಮದಲ್ಲಿನ ಸಿಸಿ ರಸ್ತೆಗಳು ಹಾಳಾಗುತ್ತಿವೆ ಎಂದು ಆರೋಪಿಸಿದ್ದಾರೆ. ಯೋಜನೆಯಡಿ ತೊಡಲಾಗಿರುವ ಬಾವಿ ವಿಫಲವಾಗಿರುವುದು ಸಾಬೀತಾಗಿದೆ. ಇದೇ ಕಾರಣಕ್ಕಾಗಿ ಎರಡನೇ ಬಾರಿ ಮತ್ತೆ ಐದು ಮೀಟರ್ ಕಾಮಗಾರಿ ಕೈಗೊಳ್ಳಲಾಗಿದೆ.

ಬಾವಿಯ ಪಕ್ಕದಲ್ಲಿ ಬೋರ್‌ವೆಲ್ ಹಾಕಿದರೂ 2 ಇಂಚ್ ನೀರು ಸಹ ದೊರೆತಿಲ್ಲ ಎಂದು ಆಪಾದಿಸಿದ್ದಾರೆ. 
ಮುಂದಿನ ವರ್ಷದ ಜೂನ್‌ವರೆಗೆ ಬಾವಿ ಬಗ್ಗೆ ಪರಿಶೀಲನೆ ನಡೆಸಬೇಕು. ಅನಂತರವೇ ಪೈಪ್‌ಲೈನ್ ಕಾಮಗಾರಿ ಮುಂದುವರೆಸಬೇಕು. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.