ADVERTISEMENT

ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆ: ಸದಸ್ಯರಿಗೆ ವಿಪ್

ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 7:07 IST
Last Updated 22 ಜುಲೈ 2013, 7:07 IST

ಬೀದರ್: ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರ ಆಯ್ಕೆಗಾಗಿ ಸೋಮವಾರ (ಜುಲೈ 22) ಸಭೆ ನಡೆಯಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಅಧ್ಯಕ್ಷರ ಆಯ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

  ಅವಿಶ್ವಾಸ ನಿರ್ಣಯದಲ್ಲಿ ಪದಚ್ಯುತರಾಗಿರುವ ದೀಪಿಕಾ ಅವರನ್ನೇ ಮತ್ತೆ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ.
ಬಿಜೆಪಿ ಚಿಹ್ನೆಯಿಂದ ಆಯ್ಕೆಯಾಗಿ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕೆಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಏಳು ಸದಸ್ಯರು ಪ್ರತಿಪಕ್ಷಗಳ ಜೊತೆಗೆ ಸೇರಿ ಈಚೆಗೆ ಅಧ್ಯಕ್ಷೆ ದೀಪಿಕಾ ಸಚಿನ್ ರಾಠೋಡ ಅವರನ್ನು ಪದಚ್ಯುತಿಗೊಳಿಸಿದ್ದರು.

ತೆರವಾದ ಸ್ಥಾನಕ್ಕಾಗಿ ಅಧ್ಯಕ್ಷರ ಆಯ್ಕೆಗಾಗಿ ಈಗ ಚುನಾವಣೆ ನಡೆಯುತ್ತಿದೆ. ಲಭ್ಯ ಮಾಹಿತಿಗಳ ಪ್ರಕಾರ, ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಶೇಷ ಸಭೆ ಸೇರಲಿದೆ. ಬೆಳಗ್ಗೆ 10.30ರಿಂದ ನಾಮಪತ್ರ ಸಲ್ಲಿಸಲು ಅವಕಾಶವಿದೆ.

`ಪಕ್ಷದ ಚಿಹ್ನೆಯಿಂದ ಆಯ್ಕೆ ಆಗಿದ್ದರೂ ಕೆಜೆಪಿ ಜೊತೆಗೆ ಗುರುತಿಸಿ ಕೊಂಡಿದ್ದ ಏಳು ಮಂದಿ ಪ್ರತಿಪಕ್ಷಗಳ ಜೊತೆಗೆ ಕೈಜೋಡಿಸಿದ್ದರಿಂದ ಹಿಂದೆ ಅಧ್ಯಕ್ಷರು ಪದಚ್ಯುತರಾದರು' ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಹೇಳಿದರು.

`ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಲು ನಿರ್ದೇಶಿಸಿ ಪಕ್ಷದ ಚಿಹ್ನೆಯಡಿ ಆಯ್ಕೆಯಾದ 18 ಸದಸ್ಯರಿಗೆ ವಿಪ್ ನೀಡಲಾಗಿದೆ. ಶನಿವಾರ ನಡೆದ ಸಭೆಯಲ್ಲಿ 11 ಜನರಿಗೆ ನೀಡಿದ್ದು, ಸಭೆಯಲ್ಲಿ ಇಲ್ಲದ ಏಳು ಸದಸ್ಯರ ಮನೆಗೇ ವಿಪ್ ತಲುಪಿಸಲಾಗಿದೆ. ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮನೆ ಬಾಗಿಲಿಗೆ ಅಂಟಿಸಿ ಬರಲಾಗಿದೆ' ಎಂದರು.

ಅಧ್ಯಕ್ಷೆಯ ಪದಚ್ಯುತಿಯಾದ ಬಳಿಕ ಪಕ್ಷ ಕೋರ್ಟ್‌ಗೆ ಹೋಗಿತ್ತು. ಅಲ್ಲಿ, ಪಕ್ಷದ ಸದಸ್ಯರಿಗೆ ವಿಪ್ ಅನ್ನು ನೀಡಲಾಗಿತ್ತೆ ಎಂಬ ಪ್ರಶ್ನೆಯೇ ಪ್ರಮುಖವಾಗಿ ಎದುರಾದ ಹಿನ್ನೆಲೆಯಲ್ಲಿ ಈ ಬಾರಿ ಆದ್ಯತೆಯ ಮೇರೆಗೆ ತನ್ನ ಎಲ್ಲ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದೇವೆ ಎಂದರು.

ಬೀದರ್ ಜಿಲ್ಲಾ ಪಂಚಾಯಿತಿಯ ಸದಸ್ಯ ಬಲ 31 ಆಗಿದ್ದು, ಈ ಪೈಕಿ ಬಿಜೆಪಿಯ 18 ಸದಸ್ಯರು, ಜೆಡಿಎಸ್ ಪಕ್ಷದ 5 ಮತ್ತು ಕಾಂಗ್ರೆಸ್ ಪಕ್ಷದ ಇಬ್ಬರು ಮತ್ತು ಪಕ್ಷೇತರ ಸದಸ್ಯರು 6 ಮಂದಿ ಇದ್ದಾರೆ.

ಜುಲೈ 1ರಂದು ನಡೆದ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಬಿಜೆಪಿಯ ದೀಪಿಕಾ ಅವರನ್ನು ಪದಚ್ಯುತಗೊಳಿಸಲಾಗಿತ್ತು.
ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಗಿ ಕೆಜೆಪಿ ಅಭ್ಯರ್ಥಿಯಾಗಿ ಈಚೆಗೆ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಶೈಲೇಂದ್ರ ಬೆಲ್ದಾಳೆ ಅವರನ್ನು ಸಂಪರ್ಕಿಸಿದಾಗ,  `ಸೋಮವಾರ ಸಭೆ ಇರುವುದು ನಿಜ.

ಆ ಬಗೆಗೆ ನೋಟಿಸ್ ಕೂಡಾ ತಲುಪಿದೆ. ಉಳಿದಂತೆ ಹೆಚ್ಚು ಮಾತನಾಡಲು ಬಯಸುವುದಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.