ADVERTISEMENT

ಬಿಜೆಪಿ ಸಭೆಯಲ್ಲಿ ಕೆಜೆಪಿ ಮುಖಂಡರು ಪ್ರತ್ಯಕ್ಷ

ಅರ್ಥವಿಲ್ಲದ ಬಿಜೆಪಿ ಉಚ್ಚಾಟನೆ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:54 IST
Last Updated 20 ಡಿಸೆಂಬರ್ 2012, 6:54 IST

ಚಿತ್ತಾಪುರ:  ಪಟ್ಟಣದ ಹೊರವಲಯದ ಶಹಾಬಾದ ರಸ್ತೆ ಮಾರ್ಗದಲ್ಲಿರುವ ಕಿಂಗ್ ಪ್ಯಾಲೇಸ್ ಪಂಕ್ಷನ್ ಹಾಲ್‌ನಲ್ಲಿ ಮಂಗಳವಾರ ಶಾಸಕ ವಾಲ್ಮೀಕ ನಾಯಕ ನೇತೃತ್ವದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಕೆಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಮತ್ತು ಬಿಜೆಪಿ ಪಕ್ಷದಿಂದ ಉಚ್ಚಾನೆಗೊಂಡ ಮುಖಂಡರು ಪ್ರತ್ಯಕ್ಷರಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಾವೇರಿಯಲ್ಲಿ ನಡೆಸಿದ ಕೆಜೆಪಿ ಸಮಾವೇಶಕ್ಕೆ ಮುಂಚೆ ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಕೆಜೆಪಿ ಸಭೆ ನಡೆಸಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಅವಂಟಿ, ಸಭೆಯಲ್ಲಿ ಪಾಲ್ಗೊಂಡ ತಾಲ್ಲೂಕು ಪಂಚಾಯಿತಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಮುಖಂಡರಾದ ಚನ್ನಣ್ಣ ಬಾಳಿ, ರವೀಂದ್ರ ಸಜ್ಜನಶೆಟ್ಟಿ, ಸಿದ್ರಾಮಯ್ಯಾ ಸ್ವಾಮಿ ಗೊಂಬಿಮಠ ಮುಂತಾದವರ ವಿರುದ್ಧ ಕ್ರಮ ತೆಗೆದುಕೊಂಡ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಎಲ್ಲರನ್ನೂ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಆದರೆ, ಶಾಸಕ ವಾಲ್ಮೀಕ ನಾಯಕ ನೇತೃತ್ವದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡ ತಾಲ್ಲೂಕು ಪಂಚಾಯಿತಿ ಸದಸ್ಯ ಸೂರ್ಯಕಾಂತ ಕಟ್ಟಮನಿ ಭಾಗವಹಿಸಿ ಭಾಷಣ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಸಭೆಯಲ್ಲಿ ಕೆಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡ ಹಾಗೂ ಕೆಜೆಪಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಬಿಜೆಪಿ ಸಭೆಯಲ್ಲಿ ಉಪಸ್ಥಿತರಾಗಿರುವುದು ನೋಡಿ ಬಿಜೆಪಿ ಕಾರ್ಯಕರ್ತರಲ್ಲಿ ಗುಸಗುಸು ಚರ್ಚೆಗೆ ನಾಂದಿಯಾಯಿತು.

ಶಾಸಕರ ಮೌನ: ನನಗೆ ಯಾವುದೇ ಮಾಹಿತಿ ನೀಡದೆ, ನನ್ನ ಗಮನಕ್ಕೆ ತರದೆ ಜಿಲ್ಲಾ ಬಿಜೆಪಿ ಪದಾಧಿಕಾರಿ ಚಿತ್ತಾಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಮಾಡಿದ ಶಾಸಕ ವಾಲ್ಮೀಕ ನಾಯಕ ಅವರು, ತಮ್ಮ ಕಟ್ಟಾ ಬೆಂಬಲಿಗರಾದ ಚಂದ್ರಶೇಖರ ಅವಂಟಿ, ಚನ್ನಣ್ಣ ಬಾಳಿ, ರವೀಂದ್ರ ಸಜ್ಜನಶೆಟ್ಟಿ, ಸಿದ್ರಾಮಯ್ಯಾ ಸ್ವಾಮಿ ಗೊಂಬಿಮಠ ಮುಂತಾದವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಕುರಿತು ಮೌನ ಮುರಿಯಲಿಲ್ಲ.

ವಿಶ್ವಾಸ ಘಾತುಕರು: ಕೆಜೆಪಿ ಸಭೆಯಲ್ಲಿ ಭಾಗವಹಿಸಿ ಕೆಜೆಪಿ ಪಕ್ಷದ ಸದಸ್ಯತ್ವ ಪಡೆದುಕೊಂಡು ಬಿಜೆಪಿಯಿಂದ ಉಚ್ಚಾಟನೆಗೊಂಡು ಮತ್ತೇ ಬಿಜೆಪಿ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಕೆಜೆಪಿ ಮುಖಂಡರು ವಿಶ್ವಾಸ ಘಾತುಕ ಕೆಲಸ ಮಾಡಿದ್ದಾರೆ. ಇಂತಹ ಜನರಿಂದ ಪಕ್ಷ ಸಂಘಟನೆ ನಿರೀಕ್ಷಿಸುವಂತಿಲ್ಲ ಎಂದು ಕೆಜೆಪಿ ರಾಜ್ಯ ಕಾರ‌್ಯಕಾರಿಣಿ ಸಮಿತಿ ಸದಸ್ಯ ತಿಪ್ಪಣಪ್ಪ ಕಮಕನೂರ ಆಕ್ರೋಶ ವ್ಯಕ್ತ ಮಾಡಿದ್ದಾರೆ.

ಶಾಸಕರ ನಡೆಯಿಂದ ಬೇಸರ: ಶಾಸಕ ವಾಲ್ಮೀಕ ನಾಯಕ ಅವರ ಸೂಚೆನೆಯಂತೆ ಬಿಜೆಪಿ ಪಕ್ಷದಲ್ಲೆ ಇದ್ದು ಕೆಜೆಪಿ ಸಭೆ ನಡೆಸಿ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದೇವೆ. ಮಂಗಳವಾರ ನಡೆಸಿದ ಬಿಜೆಪಿ ಸಭೆಯಲ್ಲಿ ಬಿಜೆಪಿ ಬಿಟ್ಟು ಕೆಜೆಪಿ ಸೇರುವ ಬಗ್ಗೆ ತೀರ್ಮಾನ ಕೈಗೊಳುವುದಾಗಿ ನಮಗೆ ಭರವಸೆ ಕೊಡಲಾಗಿತ್ತು. ಬಿಜೆಪಿ ಅಧ್ಯಕ್ಷರು ರಾಜೀನಾಮೆ ನೀಡುವ ಕುರಿತು ಸಭೆಯಲ್ಲಿ ಪ್ರಕಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಬಿಜೆಪಿ ಜಪಮಂತ್ರ ಮಾಡಿರುವ ಶಾಸಕರ ನಡೆಯಿಂದ ನಮಗೆ ತೀವ್ರ ಬೇಸರ ಉಂಟು ಮಾಡಿದೆ ಎಂದು ಕೆಜೆಪಿ ಮುಖಂಡರೊಬ್ಬರು ಪ್ರಜಾವಾಣಿಗೆ ತಮ್ಮ ನೋವು ತೋಡಿಕೊಂಡಿದ್ದಾರೆ.

ಕೆಜೆಪಿ ಅಭ್ಯರ್ಥಿ ಹುಡುಕಾಟ: ಮಂಗಳವಾರ ನಡೆದ ಬಿಜೆಪಿ ಸಭೆಯ ನಂತರ ಕೆಜೆಪಿ  ಹೊಸ ಸಂಚಲನ ಮೂಡಿಸಿದೆ. ಶಾಸಕ ವಾಲ್ಮೀಕ ನಾಯಕ ಬಿಜೆಪಿ ಬಿಟ್ಟು ಕೆಜೆಪಿ ಸೇರುತ್ತಾರೆ ಎಂಬ ಕೆಜೆಪಿ ಮುಖಂಡರಿಗೆ ನಿರಾಶೆ ಉಂಟು ಮಾಡಿದೆ. ಮುಂಬರುವ ವಿಧಾನಸಭೆ  ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿ ಶೋಧ ಮಾಡುವ ಕೆಲಸ ಕೆಜೆಪಿಯಿಂದ  ಶುರುವಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.