ADVERTISEMENT

ಬೀದರ್‌ನಲ್ಲೂ ನಂದಿನಿ ಪ್ಯಾಕಿಂಗ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 5:50 IST
Last Updated 16 ಸೆಪ್ಟೆಂಬರ್ 2011, 5:50 IST

ಜನವಾಡ/ಬೀದರ್: ಇನ್ನುಂದೆ ಬೀದರ್‌ನಲ್ಲೂ ನಂದಿನಿ ಹಾಲಿನ ಪ್ಯಾಕಿಂಗ್ ಆಗಲಿದೆ.
ಜಿಲ್ಲೆಯಲ್ಲಿ ಸಂಗ್ರಹ ಆಗುವ ಹಾಲಿನ ಪ್ಯಾಕಿಂಗ್ ಇಲ್ಲಿಯೇ ಆಗಬೇಕು ಎಂಬ ಗ್ರಾಹಕರ ಬೇಡಿಕೆ ಕೆಲವೇ ದಿನಗಳಲ್ಲಿ ಈಡೇರಲಿದೆ. ಬೀದರ್ ಡೇರಿಯಲ್ಲಿ ಹಾಲಿನ ಪ್ಯಾಕಿಂಗ್ ಆರಂಭಿಸುವುದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿದ್ದು, ಬರುವ ಅಕ್ಟೋಬರ್‌ನಿಂದ ಕಾರ್ಯಾರಂಭ ಮಾಡಲಿದೆ.

ಪ್ಯಾಕಿಂಗ್ ವ್ಯವಸ್ಥೆಗಾಗಿ 1 ಕೋಟಿ 4 ಲಕ್ಷ ರೂಪಾಯಿ ವೆಚ್ಚದ ಯಂತ್ರೋಪಕರಣ ಹಾಗೂ ಇತರೆ ಸಾಮಗ್ರಿ ಡೇರಿಗೆ ಬಂದಿಳಿವೆ. ಯಂತ್ರಗಳ ಅಳವಡಿಕೆ ಹಾಗೂ ಪ್ರಾಯೋಗಿಕ ಪ್ಯಾಕಿಂಗ್ ನಡೆಸಲಾಗುತ್ತಿದೆ ಎಂದು ತಿಳಿಸುತ್ತಾರೆ ಜಿಲ್ಲೆಯವರೇ ಆಗಿರುವ ಗುಲ್ಬರ್ಗ- ಬೀದರ್ ಹಾಲು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ.

ಬೀದರ್‌ನಲ್ಲಿಯೇ ಪ್ಯಾಕಿಂಗ್ ಘಟಕ ಆರಂಭ ಆಗಲಿರುವುದರಿಂದ ಜಿಲ್ಲೆಯ ಗ್ರಾಹಕರಿಗೆ ತಾಜಾ ಹಾಲು ಸಿಗಲಿದೆ. ಗುಲ್ಬರ್ಗಕ್ಕೆ ಹೋಗಿ ಬರಬೇಕಾದ ತಾಪತ್ರಯ ತಪ್ಪಲಿದೆ. ಜೊತೆಗೆ ಪ್ರತಿ ಲೀಟರ್ ಹಾಲಿಗೆ 1 ರೂಪಾಯಿ 20 ಪೈಸೆಯಂತೆ ಪ್ರತಿ ದಿನ ಸುಮಾರು 4 ಸಾವಿರ ರೂಪಾಯಿ ಸಾರಿಗೆ ವೆಚ್ಚ ಉಳಿತಾಯ ಆಗಲಿದೆ ಎಂದು ಹೇಳುತ್ತಾರೆ ಅವರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಒಕ್ಕೂಟದ ವ್ಯಾಪ್ತಿಯ ಬೀದರ್, ಗುಲ್ಬರ್ಗ ಮತ್ತು ಯಾದಗಿರಿ ಸೇರಿದಂತೆ ಒಟ್ಟು 19 ಸಾವಿರ ಲೀಟರ್ ಹಾಲು ಸಂಗ್ರಹ ಆಗುತ್ತಿತ್ತು. 55 ಸಾವಿರ ಲೀಟರ್ ಬೇಡಿಕೆ ಇತ್ತು. ಅದನ್ನು ಪೂರೈಸುವುದಕ್ಕಾಗಿ ಕೋಲಾರ ಮತ್ತು ಶಿವಮೊಗ್ಗದಿಂದ 36 ಸಾವಿರ ಲೀಟರ್ ಹಾಲು ತರಿಸಿಕೊಂಡು, ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿಸುತ್ತಾರೆ.

ಇದೀಗ ರೈತರಿಂದ ಒಟ್ಟು 50 ಸಾವಿರ ಲೀಟರ್ ಹಾಲು ಸಂಗ್ರಹ ಆಗುತ್ತಿದೆ. 63 ಸಾವಿರ ಲೀಟರ್ ಬೇಡಿಕೆ ಇದೆ. ಮುಂಬರುವ ದಿನಗಳಲ್ಲಿ ರೈತರಿಂದಲೇ 1 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಗುರಿ ಇದ್ದು, ಹೊರಗಿನಿಂದ ಹಾಲು ತರಿಸಿಕೊಳ್ಳುವುದನ್ನು ನಿಲ್ಲಿಸುವ ಉದ್ದೇಶ ಇದೆ ಎಂದು ವಿವರಿಸುತ್ತಾರೆ.

ಬೀದರ್ ಜಿಲ್ಲೆಯಲ್ಲಿ ಹಾಲು ಸಂಗ್ರಹ ಹೆಚ್ಚಿದ್ದರೆ ಬೇಡಿಕೆ ಕಡಿಮೆ ಇದೆ. ಗುಲ್ಬರ್ಗ ಜಿಲ್ಲೆಯಲ್ಲಿ ಹಾಲು ಸಂಗ್ರಹ ಕಡಿಮೆ ಮತ್ತು ಬೇಡಿಕೆ ಹೆಚ್ಚಿದೆ. ಬರುವ ಅಕ್ಟೋಬರ್‌ನಿಂದ ಬೀದರ್ ಜಿಲ್ಲೆಯಲ್ಲಿ ಸಂಗ್ರಹ ಆಗುವ 40 ಸಾವಿರ ಲೀಟರ್ ಹಾಲಿನ ಪ್ಯಾಕಿಂಗ್ ಬೀದರ್ ತಾಲ್ಲೂಕಿನ ಚಿಕ್‌ಪೇಟ್ ಬಳಿ ಇರುವ ಡೇರಿಯಲ್ಲಿಯೇ ಆಗಲಿದೆ. ಇದಕ್ಕಾಗಿ ಈಗಾಗಲೇ ಎಲ್ಲ ಸಿದ್ಧತೆ ನಡೆದಿದೆ. ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ, ಮಾರುಕಟ್ಟೆ ಸಹಾಯಕ ವ್ಯವಸ್ಥಾಪಕ ದೇಶಪಾಂಡೆ ಸೇರಿದಂತೆ ಒಕ್ಕೂಟದ ಸಿಬ್ಬಂದಿ ಇದರ ಸಿದ್ಧತೆಯಲ್ಲಿದ್ದಾರೆ. ಸಹಕಾರ ಸಚಿವರು, ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷರು ಹಾಗೂ ಗಣ್ಯರು ಆಹ್ವಾನಿಸಿ ಪ್ಯಾಕಿಂಗ್ ಘಟಕ ಉದ್ಘಾಟಿಸಲಾಗುತ್ತದೆ ಎಂದು ಹೇಳುತ್ತಾರೆ.

ಹಾಲಿನ ಸಂಗ್ರಹ ಮತ್ತು ಉತ್ಪಾದನೆ ಸಮ ಪ್ರಮಾಣಕ್ಕೆ ಬಂದ ನಂತರ ನೆರೆಯ ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶವಿದೆ. ಬೀದರ್‌ನಲ್ಲಿಯೇ ಪ್ಯಾಕ್ ಆಗುವುದರಿಂದ ಸುಲಭವಾಗಿ ಹೈದರಾಬಾದ್‌ಗೆ ಸರಬರಾಜು ಮಾಡಬಹುದಾಗಿದೆ ಎಂದು ತಿಳಿಸುತ್ತಾರೆ.

ಸದ್ಯ ಒಕ್ಕೂಟವು ನಂದಿನಿ ಹಾಲು ಸೇರಿದಂತೆ 35 ಸಹ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ತಿರುಪತಿಯ ಲಾಡು ತಯಾರಿಕೆಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತದೆ. ಬರುವ ದಿನಗಳಲ್ಲಿ ರೈತರಿಗೆ ಉಪಕಾರಿಯಾಗುವ ಯೋಜನೆಗಳನ್ನು ಜಾರಿಗೊಳಿಸುವ ಯೋಚನೆ ಇದೆ ಎಂದು ಹೇಳುತ್ತಾರೆ.

ಬೇರೆ ಬೇರೆ ಕಡೆಗಳಿಂದ ಬರುವ ಖಾಸಗಿ ಕಂಪೆನಿಗಳ ಹಾಲು ಸುಮಾರು 20 ಗಂಟೆಗಳಷ್ಟು ತಡವಾಗಿ ಮಾರುಕಟ್ಟೆಗೆ ಬರುತ್ತದೆ. ಹಾಲು ಒಡೆಯದಂತೆ ಅವುಗಳಿಗೆ ಕೆಮಿಕಲ್  ಬಳಸಲಾಗುತ್ತದೆ. ಹೀಗಾಗಿ ಅಂಥ ಹಾಲು ಆರೋಗ್ಯಕ್ಕೆ ಹಾನಿಕರವಾಗಿದೆ. ನಂದಿನಿ ಹಾಲು ಶುದ್ಧ ಹಾಗೂ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ವಿವರಣೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.