ADVERTISEMENT

ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ

ಬೀದರ್: ನಾಯಿ ದಾಳಿಯಿಂದ ಬಾಲಕ ಸಾವು, ಆಯುಕ್ತರ ವಿರುದ್ಧ ಪ್ರಕರಣ ದಾಖಲು

ಚಂದ್ರಕಾಂತ ಮಸಾನಿ
Published 28 ಡಿಸೆಂಬರ್ 2017, 6:20 IST
Last Updated 28 ಡಿಸೆಂಬರ್ 2017, 6:20 IST
ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ
ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ   

ಬೀದರ್: ಅನುದಾನದ ಕೊರತೆಯ ನೆಪ ಹೇಳಿಕೊಂಡು ಬೀದಿ ನಾಯಿಗಳನ್ನು ನಿಯಂತ್ರಿಸಲು ಹಿಂದೇಟು ಹಾಕುತ್ತಿದ್ದ ನಗರಸಭೆ ಕೊನೆಗೂ ಪಶು ವೈದ್ಯಕೀಯ ಇಲಾಖೆಯ ನೆರವಿನೊಂದಿಗೆ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದೆ. ಪ್ರಾಯೋಗಿಕ ಹಂತದಲ್ಲಿ ನೂರು ನಾಯಿಗಳ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ ನಾಲ್ಕು ನಾಯಿಗಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಇಡುತ್ತಿದ್ದರೂ ಕ್ರಮಕ್ಕೆ ಮುಂದಾಗಿರಲಿಲ್ಲ. ಸಾರ್ವಜನಿಕರು ಅನೇಕ ಬಾರಿ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಬಾಲಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟ ಮೇಲೆ ಆಯುಕ್ತರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ನಂತರ ನಗರಸಭೆ ಎಚ್ಚೆತ್ತುಕೊಂಡಿದೆ.

‘ಐದು ವರ್ಷಗಳಿಂದ ಬೀದಿ ನಾಯಿಗಳ ನಿಯಂತ್ರಣಕ್ಕ ಕ್ರಮ ಕೈಗೊಂಡಿಲ್ಲ. ನಗರ ಪ್ರದೇಶದಲ್ಲೇ ಸುಮಾರು 12 ಸಾವಿರ ನಾಯಿಗಳಿವೆ. ಓಲ್ಡ್‌ಸಿಟಿಯಲ್ಲಿ ಯಾರೊಬ್ಬರೂ ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ಓಡಾಡುವ ಸ್ಥಿತಿಯಲ್ಲಿ ಇಲ್ಲ. ನಾಯಿಗಳು ಬೈಕ್‌ ಸವಾರರನ್ನೂ ಬೆನ್ನಟ್ಟುತ್ತಿವೆ. ಕಾಟಾಚಾರಕ್ಕೆ ಕೆಲವು ನಾಯಿಗಳಿಗೆ ಆಪರೇಷನ್‌ ಮಾಡಿದರೆ ಸಾಲದು. ಹೆಚ್ಚು ನಾಯಿಗಳು ಇರುವ ಪ್ರದೇಶ ಗುರುತಿಸಿ ಕಾರ್ಯಾಚರಣೆ ನಡೆಸಿ ಅವುಗಳನ್ನು ಕಾಡಿಗೆ ಬಿಡಬೇಕು’ ಎನ್ನುತ್ತಾರೆ ನಗರಸಭೆ ಸದಸ್ಯ ನಬಿ ಖುರೇಶಿ.

ADVERTISEMENT

‘ಹೆಚ್ಚುತ್ತಿರುವ ಬೀದಿ ನಾಯಿಗಳನ್ನು ನಿಯಂತ್ರಿಸಲು ಅಗತ್ಯವಿರುವ ಅನುದಾನ ಕೋರಿ ಕೇಂದ್ರ ಪ್ರಾಣಿ ದಯಾ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ತಲಾ ಶೇ 50ರಷ್ಟು ಸಹಭಾಗಿತ್ವದ ಬೀದಿ ನಾಯಿ ಹಾವಳಿ ನಿಯಂತ್ರಣ ಕಾರ್ಯಕ್ರಮಕ್ಕೆ ₹ 55 ಲಕ್ಷ ಕೊಡಲು ಒಪ್ಪಿಗೆ ನೀಡಿದೆ. ಪ್ರಾಯೋಗಿಕ ಹಂತದ ಕಾರ್ಯಕ್ರಮ ಯಶಸ್ವಿಯಾದರೆ ನಗರಸಭೆಯ ಬಜೆಟ್‌ ಸಭೆಯಲ್ಲಿ ಒಪ್ಪಿಗೆ ಪಡೆದು ಯೋಜನೆಯನ್ನು ವಿಸ್ತರಿಸಲಾಗುವುದು’ ಎನ್ನುತ್ತಾರೆ ನಗರಸಭೆ ಆಯುಕ್ತ ಮನೋಹರ.

‘ಡಾ.ಮಹಮ್ಮದ್‌ ಝಕಿಯೋದ್ದಿನ್ ಸೇರಿ ಒಟ್ಟು ಐದು ಜನ ಪಶು ವೈದ್ಯರ ತಂಡ ಬೀದಿ ನಾಯಿಗಳ ಶಸ್ತ್ರಚಿಕಿತ್ಸೆ ಮಾಡಿದೆ. ಈಗಾಗಲೇ ಎಪಿಎಂಸಿಯ ಪಶು ಚಿಕಿತ್ಸಾಲಯದಲ್ಲಿ 4 ನಾಯಿಗಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೊಸ ವರ್ಷದ ಮೊದಲ ವಾರದಿಂದ ಮತ್ತೆ ಶಸ್ತ್ರಚಿಕಿತ್ಸೆ ಆರಂಭಿಸಲಾಗುವುದು’ ಎಂದು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ರವಿ ಭುರೆ ಹೇಳುತ್ತಾರೆ.

9,269 ಜನರಿಗೆ ಕಚ್ಚಿದ ನಾಯಿಗಳು

‘ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 9,269 ಜನರಿಗೆ ಬೀದಿ ನಾಯಿಗಳು ಕಚ್ಚಿವೆ.

ಕಳೆದ ವರ್ಷ ಜಿಲ್ಲೆಯ 9,166 ಮಂದಿಗೆ ನಾಯಿಗಳು ಕಚ್ಚಿದ್ದವು. ಈ ವರ್ಷ ಸಂಖ್ಯೆ ಇನ್ನೂ ಅಧಿಕವಾಗಿದೆ. ಏಪ್ರಿಲ್‌ನಲ್ಲಿ 1,068 ಜನರಿಗೆ ನಾಯಿಗಳು ಕಚ್ಚಿರುವ ದಾಖಲೆ ಇದೆ’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶಿವಶಂಕರ.

****

ನಾಯಿ ಕಚ್ಚಿ ಚಿಕಿತ್ಸೆ ಪಡೆದವರ ತಾಲ್ಲೂಕುವಾರು ವಿವರ

ತಾಲ್ಲೂಕು 2010 2013 2017

ಹುಮನಾಬಾದ್ 2,099 1,810 1,986

ಭಾಲ್ಕಿ 988 1,113 1,465

ಬೀದರ್‌ 8,423 2,940 2,064

ಔರಾದ್ 503 842 1,611

ಬಸವಕಲ್ಯಾಣ 1,284 1,611 2,143

ಒಟ್ಟು 13,297 8,316 9,269

***

2007ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿರುವ ನಾಯಿಗಳ ಸಂಖ್ಯೆ 27,194

ಪ್ರಸಕ್ತ ಜಿಲ್ಲೆಯಲ್ಲಿರುವ ನಾಯಿಗಳು ಅಂದಾಜು 1,08,776

ಬೀದರ್‌ ನಗರದಲ್ಲಿರುವ ಒಟ್ಟು ನಾಯಿಗಳು 8,070

ಗಂಡು ನಾಯಿಗಳು 3,290

ಹೆಣ್ಣು ನಾಯಿಗಳು 4,780

2012ರಲ್ಲಿ ನಗರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾದ ನಾಯಿಗಳ ಸಂಖ್ಯೆ 258

ಪ್ರಸಕ್ತ ವರ್ಷ ಶಸ್ತ್ರಚಿಕಿತ್ಸೆಗೆ ನಿಗದಿ ಪಡಿಸಿದ ನಾಯಿಗಳು 1,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.