ADVERTISEMENT

ಮತದಾನ ಜಾಗೃತಿ ಜಾಥಾ: ಪ್ರತಿಜ್ಞೆ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 6:43 IST
Last Updated 9 ಏಪ್ರಿಲ್ 2018, 6:43 IST

ಚಿಟಗುಪ್ಪ: ‘18 ವರ್ಷ ಮೇಲ್ಪಟ್ಟ ಅರ್ಹ ಮತದಾರರು ತಪ್ಪದೆ ಮತದಾನ ಮಾಡುವುದರಿಂದ ಸುಭದ್ರ ಸರ್ಕಾರ ರೂಪಿಸಿಕೊಳ್ಳಲು ಸಾಧ್ಯ’ ಎಂದು ಪಿಎಸ್ಐ ಪ್ರಕಾಶ್ ಯಾತನೂರ್ ಹೇಳಿದರು.

ಅಯ್ಯಪ್ಪ ಕಾಲೇಜಿನಲ್ಲಿ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಕೈಗಾರಿಕಾ ತರಬೇತಿ ಸಂಸ್ಥೆಗಳು, ವಲಯ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಶನಿವಾರ ನಡೆದ ಮತದಾನ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಂವಿಧಾನ ನೀಡಿದ ಹಕ್ಕನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ನುಡಿದರು.

ಬೀದರ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಶಿವಶಂಕರ್ ಟೊಕರೆ ಮಾತನಾಡಿ, ‘18 ವರ್ಷ ಪೂರೈಸಿದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದರು.

ADVERTISEMENT

ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅನಿಲ ಸಿಂಧೆ ಮಾತನಾಡಿ,‘ಮತದಾನ ಸಂವಿಧಾನ ಒದಗಿಸಿಕೊಟ್ಟ ಪವಿತ್ರ ಹಕ್ಕು. ಹೀಗಾಗಿ ಮತದಾರರು ಇದರ ಮಹತ್ವ ಅರಿತು ಯಾವುದೇ ಆಮಿಷೆಗೆ ಒಳಗಾಗದೆ ಪ್ರಜ್ಞಾವಂತಿಕೆಯಿಂದ ಮತದಾನ ಮಾಡಬೇಕು’ ಎಂದರು.

ಮಲ್ಲಯ್ಯ ಸ್ವಾಮಿ ಹಿರೇಮಠ, ನಾಗೇಶ್ ಹಿರೇಮಠ ಇದ್ದರು. ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಮತದಾನದ ಪ್ರತಿಜ್ಞೆ ಸ್ವಿಕರಿಸಿದರು. ಪ್ರಾಚಾರ್ಯ ಎನ್.ಎಸ್.ಮಲ್ಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಭು ನಿರೂಪಿಸಿ ವಂದಿಸಿದರು. ಔರಾದ್: ‘ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ದೇಶದ ಪ್ರಜಾಪ್ರಭುತ್ವ ವನ್ನು ಬಲಪಡಿಸಬೇಕು’ ಎಂದು ನೆಹರು ಯುವ ಕೇಂದ್ರದ ತಾಲ್ಲೂಕು ರಾಷ್ಟ್ರೀಯ ಯುವ ಕಾರ್ಯಕರ್ತ ರಿಯಾಜ್‌ಪಾಶಾ ಹೇಳಿದರು.

ತಾಲ್ಲೂಕಿನ ಸಂತಪುರನಲ್ಲಿ ಶನಿವಾರ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳಬೇಡಿ. ಮತದಾನ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂದು ಹೇಳಿದರು.

ಸಾಹಿತಿ ಬಾಲಾಜಿ ಕುಂಬಾರ ಮಾತನಾಡಿ ‘ಹದಿನೆಂಟು ವರ್ಷ ಪೂರೈಸಿದ ಯುವಕರು ಚುನಾವಣೆಯಲ್ಲಿ ಮತ ಚಲಾಯಿಸಲು ತಮ್ಮ ಹೆಸರನ್ನು ಮತಪಟ್ಟಿಯಲ್ಲಿ ಸೇರಿಸಲು ಈಗಲೂ ಅವಕಾಶವಿದೆ’ ಎಂದರು.

ವೈಜಿನಾಥ ನಿಟ್ಟೂರೆ, ಗಣಪತಿ ದೇಶಪಾಂಡೆ, ಅಮೀರಖಾನ್, ಚೆನ್ನಬಸವ ಭೂರೆ, ನಂದಾದೀಪ ಬೋರಾಳೆ, ಚಿರಂಜೀವಿ ಪಾಟೀಲ, ಹಣಮಂತರಾವ ಬಿರಾದಾರ, ಚಂದ್ರಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.