ADVERTISEMENT

ಮನೆಗಳು ಜಲಾವೃತ: ದಿಢೀರ್ ಧರಣಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 5:49 IST
Last Updated 14 ಅಕ್ಟೋಬರ್ 2017, 5:49 IST

ಬಸವಕಲ್ಯಾಣ: ಗುರುವಾರ ರಾತ್ರಿ ಗುಡುಗು ಮಿಂಚು ಸಹಿತ ಸುರಿದ ಭಾರಿ ಮಳೆಗೆ ಇಲ್ಲಿನ ಕೈಕಾಡಿ ಓಣಿ ಮತ್ತು ಈಶ್ವರ ನಗರ ಓಣಿಯ ಮನೆಗಳು ಜಲಾವೃತಗೊಂಡು ನಿವಾಸಿಗಳು ತೊಂದರೆ ಅನುಭವಿಸಿದರು.

ನೀರನ್ನು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಿವಾಸಿಗಳು ಶುಕ್ರವಾರ ಓಣಿ ಸಮೀಪದ ಬಸ್ ನಿಲ್ದಾಣ ರಸ್ತೆ ಬಂದ್ ಮಾಡಿ ದಿಢೀರ್‌ ಪ್ರತಿಭಟನೆ ನಡೆಸಿದರು.

‘ಮಳೆಯಾದಾಗಲೆಲ್ಲ ಪಟ್ಟಣದ ಚರಂಡಿಗಳ ನೀರು ಇಳಿಜಾರು ಪ್ರದೇಶದಲ್ಲಿನ ಓಣಿಗಳಿಗೆ ಹರಿದು ಬಂದು ಸಂಗ್ರಹಗೊಳ್ಳುತ್ತದೆ. ಆದ್ದರಿಂದ ಕೈಕಾಡಿ ಓಣಿ, ಈಶ್ವರನಗರ, ಮಾಂಗಗಾರುಡಿ ಓಣಿ, ಸತ್ಯನಾರಾಯಣ ಓಣಿಗಳಲ್ಲಿನ ಮನೆಗಳು ಜಲಾವೃತಗೊಳ್ಳುತ್ತವೆ. ಈ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರು ಒತ್ತಾಯಿಸಿದರು.

ADVERTISEMENT

ರಸ್ತೆ ಮಧ್ಯೆ ಕೂತು ಅವರು ಪ್ರತಿಭಟನೆ ಮುಂದುವರೆಸಿದ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ಪಟ್ಟಣ ಠಾಣೆ ಸಿಪಿಐ ಅಲಿಸಾಬ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೊಟ್ಟಪ್ಪಗೋಳ ಸ್ಥಳಕ್ಕೆ ಬಂದು ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಕ್ರಮ ಕೈಗೊಂಡರು. ಅಗ್ನಿಶಾಮಕ ದಳ ಸಿಬ್ಬಂದಿ ನೆರವಾದರು.

`ಮನೆಯಲ್ಲಿ ನೀರು ನುಗ್ಗಿದ್ದು ನೋಡಿ ಮಕ್ಕಳು ಗಾಬರಿಗೊಂಡಿದ್ದರು. ಆದ್ದರಿಂದ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು’ ಎಂದು ನಗರಸಭೆ ಅಧ್ಯಕ್ಷ ಅಜರಅಲಿ ನವರಂಗ್ ತಿಳಿಸಿದರು.

‘ಕೈಕಾಡಿ ಓಣಿಯಲ್ಲಿನ ಮನೆಗಳ ಸುತ್ತಮತ್ತಲಿನ ನೀರನ್ನು ಬೇರೆಡೆ ಹರಿಸಲು ಪ್ರಯತ್ನಿಸಲಾಗುತ್ತಿದೆ. ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದರಿಂದ ನೀರು ಮುಂದಕ್ಕೆ ಸಾಗಿಲ್ಲ. ತ್ಯಾಜ್ಯ ತೆಗೆಯಲಾಗಿದೆ’ ಎಂದು ನಗರಸಭೆ ನೈರ್ಮಲ್ಯ ಅಧಿಕಾರಿ ಶಂಭುಲಿಂಗ ದೇಸಾಯಿ ಹೇಳಿದರು.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.