ADVERTISEMENT

ಮಾಜಿಗಳ ಜತೆ ಹೊಸಬರ ಪ್ರವೇಶ

ಮಾಣಿಕ ಆರ್ ಭುರೆ
Published 8 ಏಪ್ರಿಲ್ 2013, 6:40 IST
Last Updated 8 ಏಪ್ರಿಲ್ 2013, 6:40 IST

ಬಸವಕಲ್ಯಾಣ: ನಾಮಪತ್ರ ಸಲ್ಲಿಸುವ ದಿನ ದೂರವಿದ್ದರೂ ಎಲ್ಲ ಪ್ರಮುಖ ಪಕ್ಷಗಳಿಂದ ಈಗಾಗಲೇ ಈ ಕ್ಷೇತ್ರದಲ್ಲಿನ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದ್ದು ಇಬ್ಬರು ಮಾಜಿ ಶಾಸಕರ ಜತೆ ಸೆಣಸಾಡಲು ಮೂವರು ಹೊಸ ಮುಖಗಳ ಪ್ರವೇಶವಾಗಿದೆ.

ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಪತ್ನಿ ಕೆಜೆಪಿ ಅಭ್ಯರ್ಥಿ ಮಲ್ಲಮ್ಮ ಪಾಟೀಲ,  ಕಾಂಗ್ರೆಸ್ ಅಭ್ಯರ್ಥಿ ಬಿ.ನಾರಾಯಣ ಮತ್ತು ಬಿಜೆಪಿ ಅಭ್ಯರ್ಥಿ  ಸಂಜಯ ಪಟವಾರಿ ಚುನಾವಣಾ ಕಣದಲ್ಲಿರುವ ಹೊಸಬರು.

ಜೆಡಿಎಸ್‌ನ ಮಲ್ಲಿಕಾರ್ಜುನ ಖೂಬಾ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ನ ಎಂ.ಜಿ.ಮುಳೆ ಕಣದಲ್ಲಿರುವ ಮಾಜಿ ಶಾಸಕರು.
ಮಾಜಿ ಶಾಸಕ ದಿ.ಸಿದ್ರಾಮಪ್ಪ ಖೂಬಾ ಅವರ ಪುತ್ರರಾದ ಮಲ್ಲಿಕಾರ್ಜುನ ಖೂಬಾ ಎಲ್ಲ ಅಭ್ಯರ್ಥಿಗಳಲ್ಲಿ ಕಿರಿಯರು. 2004 ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. 2008ರ ಚುನಾವಣೆಯಲ್ಲಿ ಸೋತಿದ್ದರು.

ಎಂ.ಜಿ.ಮುಳೆ ಅವರು ಘೋಷಿತ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಸಲ ಕ್ಷೇತ್ರದಲ್ಲಿ ಚುನಾವಣೆಗಳನ್ನು ಎದುರಿಸಿದ್ದಾರೆ. 1999ರಲ್ಲಿ ಜೆಡಿಎಸ್‌ನಿಂದ  ಸ್ಪರ್ಧಿಸಿ ಶಾಸಕರಾಗಿ ಆಯ್ಕೆಗೊಂಡಿದ್ದರು. 1985, 1989, 1994, 1999, 2004, 2008ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದು ಅವರಿಗೆ 7 ನೇ ಚುನಾವಣೆ.

ಬಿ.ನಾರಾಯಣ ಅವರು 1989 ರಲ್ಲಿ ಈ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದಾರೆ. ಮಾಳೆಗಾಂವ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಆಯ್ಕೆಗೊಂಡಿದ್ದರು. ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ರಾಜ್ಯ ಸಾಕ್ಷರತಾ ಮಿಷನ್ ಅಧ್ಯಕ್ಷರಾಗಿಯೂ ನೇಮಕಗೊಂಡು ಸೇವೆ ಸಲ್ಲಿಸಿದ್ದಾರೆ.

ಮಲ್ಲಮ್ಮ ಅಟ್ಟೂರ್ ಅವರು ಪತಿ ಬಸವರಾಜ ಪಾಟೀಲ ಅಟ್ಟೂರ್ ಕ್ಷೇತ್ರದಿಂದ ಐದು ಸಲ ಶಾಸಕರಾಗಿದ್ದರೂ ಯಾವುದೇ ಸ್ಥಾನಮಾನ ಪಡೆದವರಲ್ಲ. ಪತಿಯ ಜತೆ ಎಲ್ಲ ಚುನಾವಣೆಗಳಲ್ಲಿ ಪ್ರಚಾರ ನಡೆಸಿ ರಾಜಕೀಯವನ್ನು ಸಮೀಪದಿಂದ ನೋಡಿದ್ದಾರೆ. ಈಗ ಅಪಘಾತದಿಂದಾಗಿ ಆದ ಗಾಯದಿಂದ ಪತಿ ಸ್ಪರ್ಧೆಯಿಂದ ದೂರ ಉಳಿದಿದ್ದು, ಇವರಿಗೆ ಈಗ ಸ್ವತಃ ಚುನಾವಣೆ ಎದುರಿಸುವ ಅನಿವಾರ್ಯತೆ ಬಂದೊದಗಿದೆ.

ಸಂಜಯ ಪಟವಾರಿ ಅವರು ಬಿಜೆಪಿ ರಾಜ್ಯ ಸಮಿತಿ ಸದಸ್ಯರು. ಎಂಜಿನಿಯರ್ ವೃತ್ತಿಯಲ್ಲಿದ್ದರು. ವೃತ್ತಿ ಬಿಟ್ಟು ಈಗ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ಸಲ ಪಕ್ಷದ ಅಭ್ಯರ್ಥಿಯಾಗಿದ್ದ ಬಸವರಾಜ ಪಾಟೀಲ ಅಟ್ಟೂರ್ ಕೆಜೆಪಿಗೆ ಪಕ್ಷಾಂತರಗೊಂಡ ಬಳಿಕ ತೆರವಾದ ಸ್ಥಾನದಲ್ಲಿ ಅಭ್ಯರ್ಥಿಯಾಗಿ ಬಿಜೆಪಿ ಇವರನ್ನು ಘೋಷಿಸಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳ ಘೋಷಣೆಯೊಂದಿಗೆ ಚುನಾವಣೆಯ ಕಾವು ಹೆಚ್ಚಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.