ADVERTISEMENT

ಮಾಣಿಕನಗರ ಜ್ಞಾನರಾಜಶ್ರೀಗಳಿಂದ ದಾನ ವಿತರಣೆ

ದತ್ತ ಜಯಂತಿ ಉತ್ಸವ ದಕ್ಷಿಣಾ ದರ್ಬಾರ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 8:50 IST
Last Updated 27 ಡಿಸೆಂಬರ್ 2012, 8:50 IST

ಹುಮನಾಬಾದ್: ದತ್ತಜಯಂತಿ ಅಂಗವಾಗಿ ಹತ್ತಿರದ ಮಾಣಿಕನಗರದ ಮಾಣಿಕಪ್ರಭು ದೇವಸ್ಥಾನದಲ್ಲಿ ಮಂಗಳವಾರ ದಕ್ಷಿಣಾ ದರ್ಬಾರ್ ನಿಮಿತ್ತ ಪರಂಪರೆಯಂತೆ ಸಂಸ್ಥಾನ ಪೀಠಾಧಿಪತಿ ಡಾ.ಜ್ಞಾನರಾಜಶ್ರೀ ಅವರು ಕೈಚಾಚಿ ಬಂದ ಅನೇಕರಿಗೆ ದಾನ ನೀಡಿದರು.

ಮಂಗಳವಾರ ಬೆಳಿಗ್ಗೆ ಶ್ರೀಗಳ ಸನ್ನಿಧಿಯಲ್ಲಿ ವೇದಘೋಷ ಸಮೇತ ಪ್ರಭುಗಳ ಸಂಜೀವಿನಿ ಸಮಾಧಿಗೆ ಆಗಮಿಸಿ, ಮಹಾರುದ್ರಾಭಿಷೇಕ ಮತ್ತು ಭಕ್ತಕಾರ್ಯ ಕಲ್ಪದ್ರೂಮ ಮಹಾಮಂತ್ರ ಪಠಣ ಮತ್ತು ರಾಜೋಪಚಾರ ನೆರವೇರಿತು. ಬಳಿಕ ದಾನ ಸ್ವೀಕರಿಸುವ ಅಧಿಕಾರ ಹೊಂದಿರುವ ಬ್ರಾಹ್ಮಣರು, ಫಕೀರರು, ಜಂಗಮರು, ಭಿಕ್ಷುಕರು, ಗೋಸಾಯಿ ಮೊದಲಾದ ಕೈಚಾಚಿದವರಿಗೆ ಪೀಠಾಧಿಪತಿ ಡಾ.ಜ್ಞಾನರಾಜಶ್ರೀ ಅವರು ದಾನ ನೀಡಿದರು. ಗರ್ಭಿಣಿ ಮಹಿಳೆಯರಿಗೆ ದಕ್ಷಿಣೆ ಕೊಡುವ ವೇಳೆ ಗರ್ಭದಲ್ಲಿದ್ದ ಮಗುವಿಗೂ ಲೆಕ್ಕಹಾಕಿ ದಾನ ನೀಡುವ ಪದ್ಧತಿ ಇರುವುದು ಸಂಸ್ಥಾನ ಪರಂಪರೆಯ ವಿಶೇಷ.

ಸಂಗೀತ ಕಛೇರಿ: ದಕ್ಷಿಣಾ ದರ್ಬಾರ ಅಂಗವಾಗಿ ಮಂಗಳವಾರ ನಡೆದ ಸಂಗೀತ ಕಛೇರಿಯಲ್ಲಿ ಹೈದರಾಬಾದ್ ಅನುಷ್ಕಾ ಆಕಾಂಕ್ಷಾ, ಬೆಂಗಳೂರಿನ ಚಿಜ್ವಲ್ ಪ್ರಭು, ಗೌತಮ್ ಪ್ಯಾಟಿ, ಗೋವಾದ ಶಶಾಂಕ ಮುಕ್ತೆದಾರ್, ಲಾತೂರಿನ ವಿಜಯಕುಮಾರ ಬನ್ಸೂಳೆ, ಸಂಧ್ಯಾ ಕೌಟಗೀಕರ್, ಕೊಲ್ಹಾಪೂರದ ವಿ.ಕೆ.ಕಾಗಲಕರ್, ಬೆಳಗಾವಿ ಹೃಷಿಕೇಶ ಮೊದಲಾದವರು ನಡೆಸಿಕೊಟ್ಟ ಸಂಗೀತ ಕಛೇರಿ ನೆರೆದ ಕಲಾಸಕ್ತರ ಮನಸೂರೆಗೊಂಡವು. ಸಂಸ್ಥಾನದ ಆನಂದರಾಜ ಪ್ರಭು ಅವರ ಆಕರ್ಷಕ ನಿರೂಪಣೆ ಕೂಡ ಗಮನಾರ್ಹವಾಗಿತ್ತು. ಚೇತನರಾಜ ಪ್ರಭು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.