ADVERTISEMENT

ಮಾದಕ ವಸ್ತುಗಳ ಸೇವನೆ ಸಾವಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 9:10 IST
Last Updated 20 ಜೂನ್ 2012, 9:10 IST

ಬೀದರ್: ಮಾದಕ ವಸ್ತುಗಳ ಸೇವನೆ ಸಾವಿಗೆ ಆಹ್ವಾನಿಸಿದಂತೆ. ಆದ್ದರಿಂದ ಯಾವುದೇ ಕಾರಣಕ್ಕೂ ಮಾದಕ ವಸ್ತುಗಳಿಗೆ ಯಾರೂ ಬಲಿಯಾಗಬಾರದು ಎಂದು ಖ್ಯಾತ ಚಲನಚಿತ್ರ ನಟಿ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಸಲಹೆ ಮಾಡಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತುಗಳ ಮಾಯೆ ಕುರಿತ ಅರಿವಿನ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಯುವ ಜನಾಂಗ ದಾರಿ ತಪ್ಪುವ ಮುನ್ನ ಅವರಿಗೆ ಸರಿಯಾದ ತಿಳುವಳಿಕೆ ನೀಡುವುದು ಅಗತ್ಯ. ಯುವ ಜನಾಂಗ ದೇಶದ ಸಂಪತ್ತಾಗಿದ್ದು, ಅವರು ಆರೋಗ್ಯವಂತರಾಗಿದ್ದಲ್ಲಿ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ಪ್ರಜ್ಞಾವಂತರು ಮಾದಕ ವಸ್ತುಗಳಿಗೆ ಮಾರು ಹೋಗುವುದಿಲ್ಲ. ಒಂದು ಕುಟುಂಬದಲ್ಲಿ ಒಬ್ಬ ಕುಡುಕ ನಿದ್ದರೆ, ಆ ಕುಟುಂಬವೇ ಬೀದಿಗೆ ಬರುತ್ತದೆ. ಕುಟುಂಬದ ಮಹಿಳೆಯರು ಜಾಗೃತರಾಗಬೇಕು. ಕುಡಿದು ಬಂದ ತಂದೆಯನ್ನು ಮಕ್ಕಳು ವಿರೋಧಿಸಬೇಕು ಎಂದು ಎಂದು ಇನ್ನೂರ್ವ ನಟಿ ಶ್ರುತಿ ಕಿವಿಮಾತು ಹೇಳಿದರು.

ಮಾದಕ ವಸ್ತುಗಳ ಸೇವೆಯಿಂದ ಆಗುವ ಅನಾಹುತಗಳ ಬಗ್ಗೆ ಎಲ್ಲರಿಗೂ ಅರಿವಿದೆ, ಆದರೆ, ಅರಿವಿದ್ದರೆ ಮಾತ್ರ ಸಾಲದು. ಅದು ಆಚರಣೆಗೆ ತರಬೇಕು ಎಂದು ವಿಶೇಷ ಉಪನ್ಯಾಸ ನೀಡದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ತಿಳಿಸಿದರು. ಖಾಲಿ ಚೀಲದಂತಿರುವ ಇಂದಿನ ಯುವಕರಲ್ಲಿ ಒಳ್ಳೆಯ ಮಾನವಿಯ ಮೌಲ್ಯಗಳನ್ನು ಂಬಬೇಕಾಗಿದೆ ಎಂದರು.

 ಇನ್ನೂರ್ವ ವಿಶೇಷ ಉಪನ್ಯಾಸ ನೀಡಿದ ಬೀದರ್ ಮೆಡಿಕಲ್ ಕಾಲೇಜು ಅಸೋಸಿಯೇಟ್ ಪ್ರೊಫೆಸರ್ ಡಾ. ರಾಜಶೇಖರ್ ಕೌಜಲಗಿ ಅವರು, ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಮಾತ್ರವಲ್ಲ, ಅವರು ದೈಹಿಕವಾಗಿ ಕುಗ್ಗುತ್ತಾರೆ. ಆರೊಗ್ಯವಂತಾರಾಗಿರಲು ಮಾದಕ ವಸ್ತುಗಳ ಸೇವನೆಯಿಂದ ದೂರವಿರುವಂತೆ ಸಲಹೆ ನೀಡಿದರು.

ನಟಿ ಸುಧಾರಾಣಿ, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಮಾತನಾಡಿದರು. ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಶಿವಶರಣಪ್ಪ ವಾಲಿ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಎಂ.ವಿ. ಮಂಡಿ, ವಾರ್ತಾ ಇಲಾಖೆಯ ಉಪನಿರ್ದೇಶಕ ಬಸವರಾಜ ಕಂಬಿ, ಸಹಾಯಕ ನಿರ್ದೇಶಕ ಜಿ. ಚಂದ್ರಕಾಂತ್, ಡಿಡಿಪಿಯು ಯಲ್ಲಪ್ಪ ದಶವಂತರ್ ಉಪಸ್ಥಿತರಿದ್ದರು. ಮಂಡಳಿಯ ಕಾರ್ಯದರ್ಶಿ ಎಚ್.ಬಿ. ದಿನೇಶ್ ಸ್ವಾಗತಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಶಫಿಸಾದುದ್ದೀನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.