ADVERTISEMENT

ಮುಂದಿನ ವರ್ಷ ಬೀದರ್ ಜಿಲ್ಲೆಗೆ ರಾಷ್ಟ್ರಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 8:25 IST
Last Updated 4 ಅಕ್ಟೋಬರ್ 2011, 8:25 IST

ಹುಮನಾಬಾದ್: ಕಳೆದ ಕೆಲ ವರ್ಷ ಹಿಂದೆ ತೆಗೆಳಿಕೆಗೆ ಸೀಮಿತಗೊಳ್ಳುವ ಮೂಲಕ ಇಡೀ ರಾಜ್ಯಕ್ಕೆ ಚಿರಪರಿಚಿತಗೊಂಡಿದ್ದ ಬೀದರ್ ವಯಸ್ಕರ ಶಿಕ್ಷಣ ಇಲಾಖೆಯನ್ನು ಈಗ ರಾಜ್ಯಪ್ರಶಸ್ತಿ, ಪುರಸ್ಕಾರ ಮೊದಲಾದ ವಿಶೇಷ ಸಾಧನೆ ಮೂಲಕ ಹೊಗಳಿಕೆಗೆ ಸೀಮಿತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ಶಂಕರರಾವ ಸಿಂಧೆ ತಿಳಿಸಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಿಗಾಗಿ ಸೋಮವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮೇಲಿನಂತೆ ವಿವರಿಸಿದರು.

ವಯಸ್ಕರ ಶಿಕ್ಷಣ ಸಾಧನೆ ಕುರಿತು ರಾಜ್ಯ ಮಟ್ಟದ ಸಭೆಯಲ್ಲಿ ಚರ್ಚೆ ಬಂದಾಗ ಬೀದರ್ ಜಿಲ್ಲೆ ಹಗರಣ, ವಂಚನೆ ಕುರಿತ ವಿಷಯಗಳೇ ಚರ್ಚೆಗೆ ಬರುತ್ತಿದ್ದವು. ಸರ್ಕಾರ ಹಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಹಗರಣಗಳ ಬಲಿಗೆ ಸಿಲುಕಿ ಹಿಂದಿನ ಇಬ್ಬರು ಅಧಿಕಾರಿಗಳು ಅಮಾನತುಗೊಂಡ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕುರ್ಚಿ ಜವಾಬ್ದಾರಿಯನ್ನು ಅಂದಿನ ಜಿಲ್ಲಾಧಿಕಾರಿ ಅನೀಲಕುಮಾರ ನನಗೆ ವಹಿಸಿಕೊಟ್ಟರು.

9ವರ್ಷ ನಿರಂತರ ಸೇವೆ ಸಲ್ಲಿಸಿದ ಪ್ರೇಕರರಿಗೆ ಸಂಬಳವನ್ನೇ ನೀಡಿರಲಿಲ್ಲ. ಹಂತಹಂತವಾಗಿ ಆ ಸಮಸ್ಯೆ ಬಗೆಹರಿಸಿ, ಎಲ್ಲ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಇಲಾಖೆಯನ್ನು ಜನತೆ  ಗೌರವದಿಂದ ನೋಡುವ ಹಾಗೆ ಪರಿವರ್ತಿಸಿದೆ. ಜೊತೆಗೆ ಸಾಕ್ಷರತಾ ಪ್ರಮಾಣ ಗಣನೀಯ ವೃದ್ಧಿಸುವ ಮೂಲಕ ಈಶಾನ್ಯ ಭಾಗದ ಇತರೆ ಜಿಲ್ಲೆ ಜನ ಬೆರಗುಗೊಳ್ಳುವಂತೆ ಚಿತ್ರಣ ಬದಲಾಯಿಸಿದ ಕುರಿತು  ಸಿಂಧೆ ವಿಸ್ತೃತ ವಿವರಿಸಿದರು.

ರಾಜ್ಯ ಮಟ್ಟದ 11ಪ್ರಶಸ್ತಿಗಳ ಪೈಕಿ 5ಬೀದರ್ ಜಿಲ್ಲೆಗೆ ಸಂದಿವೆ. ಆ ಪೈಕಿ ನಿಸ್ವಾರ್ಥ ಸೇವೆ ಸಲ್ಲಿಸಿರುವ  ಹುಡಗಿ ಗ್ರಾಮದ ಪ್ರಭುಮಾಲೆ ಮೊದಲಾಗಿ ಇನ್ನುಳಿಕ ನಾಲ್ವರು ಪ್ರಶಸ್ತಿ ಭಾಜನರಾಗಿರುವ ವಿಷಯ ಜಿಲ್ಲೆ ಜನೆತೆ ಹೆಮ್ಮೆಯ ಸಂಗತಿ ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯ ಗಜೇಂದ್ರ ಕನಕಟಕರ್ ಪ್ರಾಮಾಣಿಕ ಸೇವೆ ಮೂಲಕ ಜಿಲ್ಲೆ ಕೀರ್ತಿ ಇನ್ನೂ ಹೆಚ್ಚಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಉಪಾಧ್ಯಕ್ಷ ಉಮಾದೇವಿ, ಸದಸ್ಯ ಬಾಬುರಾವ ಟೈಗರ್, ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿರಾವ ಡೋಣಿ, ಮೊದಲಾದವರು ಇದ್ದರು. ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್ ನೂರೋದ್ದೀನ್ ಪ್ರಶಸ್ತಿ ಪುರಸ್ಕೃತರು ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಶಂಕರ ಸಿಂಧೆ, ತಾಲ್ಲೂಕು ಸರ್ಕಾರಿ ಸಂಯೋಜಕ ರಮೇಶ ಬಾಗವಾಲೆ ಅವರಿಗೆ ವೈಯಕ್ತಿಕ ಕಾಣಿಕೆ ನೀಡಿ, ಸತ್ಕರಿಸಿದರು.

ಈಶ್ವರ ಪ್ರಾರ್ಥಿಸಿದರು. ಶಿವರಾಜ ಲಾಡಕರ್ ಸ್ವಾಗತಿಸಿದರು. ಭೀಮಶಾ ಚೀನಕೇರಿ ವಂದಿಸಿದರು. ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಕಾಂತ ಸೂಗಿ ನಿರೂಪಿಸಿದರು. ವಿವಿಧ ಸಂಘಟನೆಗಳ ಸುರೇಶ ಘಾಂಗ್ರೆ, ಶಿವಪುತ್ರ ಮಾಳಗೆ ಮೊದಲಾದವರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ, ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.