ADVERTISEMENT

ಮೆಡಿಕಲ್ ಕಾಲೇಜಿನ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 8:00 IST
Last Updated 20 ಜನವರಿ 2011, 8:00 IST

ಬೀದರ್: ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ತಂಡ ಮಂಗಳವಾರ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತಂಡದ ಸದಸ್ಯರು ಬೆಳಿಗ್ಗೆ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ವೀಕ್ಷಿಸಿದರು.

ಕಳೆದ ವರ್ಷ ಕಾಲೇಜಿಗೆ ಭೇಟಿ ನೀಡಿದ್ದ ತಂಡ ಭೋದಕ ಸಿಬ್ಬಂದಿ, ಪ್ರಯೋಗಾಲಯ, ಯಂತ್ರೋಪಕರಣ ಸೇರಿದಂತೆ ವಿವಿಧ ಸೌಕರ್ಯಗಳ ಕೊರತೆ ಪತ್ತೆ ಹಚ್ಚಿತು. ಅಲ್ಲದೇ ಕಾಲೇಜಿನ ಮಾನ್ಯತೆ ನವೀಕರಣಕ್ಕೆ ನಿರಾಕರಿಸಿತ್ತು. ನಂತರ ಸಂಸದ ಧರ್ಮಸಿಂಗ್ ಅವರ ಮಧ್ಯಪ್ರವೇಶದಿಂದಾಗಿ ಪರವಾನಗಿ ನವೀಕರಣಗೊಂಡು ಕಾಲೇಜು ಮುಂದುವರೆದಿತ್ತು. ಎಂ.ಸಿ.ಐ. ತಂಡ ಕಾಲೇಜಿಗೆ ಭೇಟಿ ನೀಡಿದಾಗಲೆಲ್ಲ ಮೂಲಸೌಕರ್ಯಗಳ ಕೊರತೆ ಹೊರ ಹಾಕುತ್ತಲೇ ಇದೆ. ಅದಾಗಿಯು ಈವರೆಗೆ ಕಾಲೇಜಿಗೆ ಅಗತ್ಯ ಇರುವ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾತ್ರ ನಡೆದಿಲ್ಲ ಎಂದು ಶಾಸಕ ರಹೀಮ್‌ಖಾನ್ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಜಿಲ್ಲೆಯ ಜೊತೆಗೆ ಮಲತಾಯಿ ಧೋರಣೆ ಅನುಸರಿಸುತ್ತದೆ. ಬಹು ವರ್ಷಗಳ ನಿರೀಕ್ಷೆಯ ನಂತರ ಜಿಲ್ಲೆಯಲ್ಲಿ ಸರ್ಕಾರಿ  ವೈದ್ಯಕೀಯ ಕಾಲೇಜು ಆರಂಭಗೊಂಡಿದೆ. ಹೀಗಾಗಿ ಕಾಲೇಜಿಗೆ ಬೋಧಕ ಸಿಬ್ಬಂದಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಸರ್ಕಾರ ಕೂಡಲೇ ಸೌಕರ್ಯ ಕಲ್ಪಿಸದಿದ್ದರೆ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸುತ್ತಾರೆ.

ಈ ಬಾರಿಯೂ ಎಂಸಿಐ ತಂಡ ಅನೇಕ ಕೊರತೆಗಳನ್ನು ಪಟ್ಟಿ ಮಾಡಿದೆ. ಈ ಹಿಂದೆ ನೀಡಿದ ಎಚ್ಚರಿಕೆಯ ನಂತರವೂ ಸರ್ಕಾರ ಕಾಲೇಜಿಗೆ ಬೇಕಿರುವ ಬೋಧಕ ಸಿಬ್ಬಂದಿ ಮತ್ತು ಇತರೆ ಕೊರತೆಗಳನ್ನು ನೀಗಿಸದೇ ಇರುವುದರಿಂದ ಪ್ರತಿ ವರ್ಷ ಕಾಲೇಜಿನ ಮೇಲೆ ಎಂ.ಸಿ.ಐ. ಕತ್ತಿ ತೂಗುತ್ತಲೇ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.