ADVERTISEMENT

ಮೊಸಳೆ ಕಣ್ಣೀರಿಗೆ ಜನತೆ ಬಲಿ ಆಗಬಾರದು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 9:20 IST
Last Updated 26 ಏಪ್ರಿಲ್ 2012, 9:20 IST

ಹುಮನಾಬಾದ್: ನಾನೂ ಸೇರಿದಂತೆ ಯಾವುದೇ ಪಕ್ಷದ ರಾಜಕಾರಣಿಗಳ ಮೊಸಳೆ ಕಣ್ಣೀರಿಗೆ ಮುಗ್ಧ ಮತದಾರರು ಬಲಿ ಆಗಬಾರದು ಎಂದು ಶಾಸಕ ಹಾಗೂ ಬಿ.ಎಸ್.ಆರ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಮನವಿ ಮಾಡಿದರು.

ತಮ್ಮ ಪಕ್ಷದ ವತಿಯಿಂದ ಮಂಗಳವಾರ ಬಸವಕಲ್ಯಾಣದಿಂದ ಆರಂಭಿಸಲಾದ ಪಾದಯಾತ್ರೆ ಬುಧವಾರ ಮಧ್ಯಾಹ್ನ ಹತ್ತಿರದ ಮಾಣಿಕನಗರ ಮಾಣಿಕಪ್ರಭು ದೇವಸ್ಥಾನದಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ, ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ರೈತರನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ. ರಾಜ್ಯದ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಮುಗ್ಧ ರೈತರು ದನಗಳಿಗೆ ಮೇವಿಲ್ಲದೇ ಪರದಾಡುತ್ತಿದ್ದಾರೆ. ಆದರೇ ಕಾಟಾಚಾರಕ್ಕಾಗಿ ಎಂಬಂತೆ ಕೇವಲ ಮೇವು ಸಂಗ್ರಹ ಕೇಂದ್ರ ಉದ್ಘಾಟಿಸಿದೆ ಆದರೆ, ಸರ್ಕಾರ ಮಾರಾಟ ಮಾಡುತ್ತಿರುವ ಮೇವಿಗಿಂತ ಖಾಸಗಿ ರೈತ ಬಾಂಧವರ ಬಳಿ ಅರ್ಧ ಬೆಲೆಗೆ ಕೈಗೆಟುಕುತ್ತಿದೆ. ಮೇವು ಮತ್ತು ಕುಡಿಯುವ ನೀರಿಗಾಗಿ ಸರ್ಕಾರ ಮಾಡುತ್ತಿರುವುದಾದರೂ ಏನು ? ಎಂದು ಶ್ರೀರಾಮುಲು ಪ್ರಶ್ನಿಸಿದರು,

ಬಡವರು, ಶೋಷಿತ ವರ್ಗದರವ ಅಭಿವೃದ್ಧಿ ಆಗಬೇಕು. ಎಲ್ಲ ಸಮೂದಾಯದ ಸರ್ವತೋಮುಖ ಅಭಿವೃದ್ಧಿ ಆಗಬೇಕು ಎಂಬುದು ತಮ್ಮ ಕನಸು ಅದಕ್ಕೆ ಈ ರಾಜ್ಯದ ಜನತೆ ಸಹಕರಿಸಬೇಕು ಎಂದರು. ರಾಜ್ಯದ 224ವಿಧಾನಸಭಾ ಕ್ಷೇತ್ರಗಳಿಂದಲೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಈಳಿಸುವುದು ಖಚಿತ ಎಂದು ತಿಳಿಸಿದ ಅವರು, ನಮ್ಮ ಪಕ್ಷ ಬೇರೆ ಯಾವುದೇ ಪಕ್ಷದ ಮುಖಂಡರನ್ನು ಆಹ್ವಾನಿಸುತ್ತಿಲ್ಲ.
 
ಮತ್ತು ಅದರ ಅವಶ್ಯಕತೆಯೂ ನಮಗೆ ಇಲ್ಲ. ಪಕ್ಷದ ಸಿದ್ಧಾಂತ ಮೆಚ್ಚಿ ಬರುವುದಾದರೇ ಯಾವುದೇ ಪಕ್ಷ ಮಾತ್ರವಲ್ಲ ಅತ್ಯಂತ ಕಡು ಬಡವರಾದರೂ ಸರಿ ಅಂಥವರನ್ನು ಆತ್ಮೀಯವಾಗಿ ಸ್ವಾಗತಿಸುವುದಾಗಿ ತಿಳಿಸಿದರು.

ರಕ್ಷಿತಾರಿಂದ ಪಕ್ಷಕ್ಕೆ ಬಲ: ತಮ್ಮ ಪಕ್ಷಕ್ಕೆ ಸೇರ್ಪಡೆಗೊಂಡ ಖ್ಯಾತ ಚಿತ್ರನಟಿ ರಕ್ಷಿತಾ ಅವರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಪಕ್ಷ ಸಂಘಟನೆ ಸಂಬಂಧ ಅವರನ್ನು ಇನ್ನೂ ಪರಿಣಾಮಕಾರಿ ಆಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರೀಯಿಸಿದರು.

ರಾಜ್ಯದ ಯಾವುದೇ ವಿಧಾನ ಸಭಾ ಕ್ಷೇತ್ರಗಳಿಂದ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಮತ್ತು ಈ ಪಕ್ಷ ರೆಡ್ಡಿಗಳಿಗೆ ಮಾತ್ರ ಸೀಮಿತ ಆಗಿರದೇ ಇದು ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂಬುದೇ ತಮ್ಮ ಇಚ್ಛೆ ಎಂದು ವಿವರಿಸಿದರು.

ರಾಜ್ಯ ಸರ್ಕಾರ ಮಾಡುತ್ತಿರುವ ಸಾಲದಿಂದ ರಾಜ್ಯದ ಪ್ರತಿಯೊಬ್ಬ ವ್ಯಕ್ತಿ ತಲೆ ಮೇಲೆ ರೂ. 80ಸಾವಿರ ಹೊರೆ ಬೀಳಲಿದೆ. ಇದೂ ಎಂಥ ಅಭಿವೃದ್ಧಿ ಎಂದು ಶ್ರೀರಾಮುಲು ಪ್ರಶ್ನಿಸಿದರು. ರಾಜ್ಯದ ಜನತೆಯನ್ನು ಪಾದಯಾತ್ರೆ ಮೂಲಕ ಬದಲಾವಣೆ ತರಬೇಕಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
 
ನಂತರ ಹುಮನಾಬಾದ್ ಪಟ್ಟಣದ ಗ್ರಾಮ ದೇವತೆ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಮುಖ್ಯಬೀದಿ ಮೂಲಕ ರಥ ಮೈದಾನ ತಲುಪಿದರು. ಖ್ಯಾತ ಚಿತ್ರನಟಿ ರಕ್ಷಿತಾ, ಮಾಜಿ ಸಂಸದ ಸಣ್ಣ ಫಕೀರಪ್ಪ, ಜೆ.ಶಾಂತಾ ಸ್ಥಳೀಯ ಮುಖಂಡರಾದ ಬ್ಯಾಂಕ್‌ರೆಡ್ಡಿ, ಗುಂಡಾರೆಡ್ಡಿ, ತಿರುಮಲರೆಡ್ಡಿ, ರಾಜು, ಜಮೀಲ್‌ಖಾನ್, ಅಪ್ಪು ಕಟ್ಟಿಮನಿ ಮೊದಲಾದವರು ಇದ್ದರು. ನಟಿ ರಕ್ಷಿತಾ ಅವರನ್ನು ವೀಕ್ಷಿಸುವುದಕ್ಕಾಗಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಮಾಣಿಕಪ್ರಭು ದೇವಸ್ಥಾನ ಸುತ್ತಮುತ್ತ ನೆರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.