ADVERTISEMENT

ರಸ್ತೆ ಮೇಲೆ ಮಣ್ಣ ರಾಶಿ: ಸಂಚಾರ ದುಸ್ತರ

ನಗರ ಸಂಚಾರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 9:55 IST
Last Updated 8 ಜುಲೈ 2013, 9:55 IST
ಬೀದರ್‌ನ ನಂದಿ ಕಾಲೋನಿಯ ರಸ್ತೆಯಲ್ಲಿ ಅಲ್ಲಲ್ಲಿ ರಾಶಿ ರಾಶಿ ಮಣ್ಣು ಸುರಿದಿರುವುದು. ವಾರ ಕಳೆದರೂ ಇದನ್ನು ಸಮತಟ್ಟು ಮಾಡುವ ಕಾರ್ಯ ಆಗಿಲ್ಲ
ಬೀದರ್‌ನ ನಂದಿ ಕಾಲೋನಿಯ ರಸ್ತೆಯಲ್ಲಿ ಅಲ್ಲಲ್ಲಿ ರಾಶಿ ರಾಶಿ ಮಣ್ಣು ಸುರಿದಿರುವುದು. ವಾರ ಕಳೆದರೂ ಇದನ್ನು ಸಮತಟ್ಟು ಮಾಡುವ ಕಾರ್ಯ ಆಗಿಲ್ಲ   

ಬೀದರ್: ಮಳೆಗಾಲ ಆರಂಭವಾದರೆ ನಗರದ ಬಡಾವಣೆಗಳ  ಹೆಚ್ಚಿನ ರಸ್ತೆಗಳು ಬಳಕೆಗೆ ಯೋಗ್ಯವಾಗಿರುವುದಿಲ್ಲ. ಡಾಂಬರು ಕಾಣದ ಇಂಥ ರಸ್ತೆಗಳನ್ನು ಸ್ಥಳೀಯ ಆಡಳಿತ ಸರಿಪಡಿಸಬೇಕು ಎಂಬ ನಿರೀಕ್ಷೆ ಸಹಜ. ಆದರೆ, ಇಲ್ಲಿ ಮೊದಲೇ ದುಃಸ್ಥಿತಿಯಲ್ಲಿದ್ದ ರಸ್ತೆಯಲ್ಲಿ ರಾಶಿ, ರಾಶಿ ಮಣ್ಣು ಗುಡ್ಡೆ ಹಾಕಿ ಇನ್ನಷ್ಟು ಹದಗೆಡಿಸಲಾಗಿದೆ.

ಈಚೆಗೆ ಬಳಕೆಗೆ ತೆರವುಗೊಳಿಸಲಾದ ರೈಲ್ವೆ ಕೆಳಸೇತುವೆ ಸ್ಥಳದಿಂದ ಸಾಗಿಸಲಾದ ಮಣ್ಣನ್ನು ಹೀಗೆ ಬಡಾವಣೆಯ ರಸ್ತೆಗೆ ಸುರಿಯಲಾಗಿದೆ ಎಂಬ ದೂರುಗಳಿವೆ. ಇರುವ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳದೇ ಹೆಚ್ಚುವರಿಯಾಗಿ ಅಲ್ಲಲ್ಲಿ ಮಣ್ಣಿನ ರಾಶಿ ಹಾಕಿ ಸಂಚಾರಕ್ಕೆ ಸಮಸ್ಯೆ ತಂದಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ನಗರಸಭೆಯ ಕೇಂದ್ರ ಕಚೇರಿಗೆ ಸಮೀಪದಲ್ಲಿ, ಕೆಇಬಿ ಹಿಂಭಾಗದ ನಂದಿ ಕಾಲೊನಿಯಲ್ಲಿ ರ ಲೋಪ ಸಂಗ್ರಹವಾಗಿರುವ ಮಳೆ ನೀರಿನೊಂದಿಗೆ ಹೆಚ್ಚುವರಿಯಾಗಿ ಸುರಿದಿರುವ ಮಣ್ಣು ಸೇರಿ ಆ ಮಾರ್ಗದಲ್ಲಿ ವಾಹನಗಳು ಓಡಾಡಲಾಗದ ಸ್ಥಿತಿ ಇದೆ. ಸುತ್ತು ಬಳಸಿ ಮನೆಗಳಿಗೆ ತಲುಪಬೇಕಾದ ಸ್ಥಿತಿ ಅಲ್ಲಿನ ನಿವಾಸಿಗಳದು.

ಈ ಹಿಂದೆಯೇ ರಸ್ತೆ ದುರಸ್ತಿಗೆ ಪಡಿಸಲು ಸ್ಥಳೀಯ ವಾರ್ಡ್ ಪ್ರತಿನಿಧಿಸುವ ನಗರಸಭೆ ಸದಸ್ಯ ಮತ್ತು ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿರುವ ಇಲ್ಲಿನ ನಿವಾಸಿಗಳು ಈಗ, ನಿವಾಸಿಗಳೇ ಒಗ್ಗೂಡಿ ಸಂಪರ್ಕ ರಸ್ತೆಯನ್ನು ದುರಸ್ತಿ ಪಡಿಸಿಕೊಳ್ಳುವ ಸಾಧ್ಯತೆಗಳ ಬಗೆಗೆ ಚಿಂತನೆ ನಡೆಸಿದ್ದಾರೆ.

ನಗರಸಭೆ ಆಯುಕ್ತ ರಾಮದಾಸ್ ಅವರನ್ನು ಸಂಪರ್ಕಿಸಿದಾಗ, `ಲಭ್ಯವಿರುವ ಗಟ್ಟಿಯಾದ ಇಟ್ಟಿಗೆ ಚೂರು, ಕಲ್ಲುಗಳಿದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಂಡಿ ಇರುವ ರಸ್ತೆಗಳಲ್ಲಿ ಹಾಕಿ, ಸರಿಪಡಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಲಾಗಿತ್ತು.
ಆದರೆ, ಮಣ್ಣು ಸುರಿಯುವಂತೆ ಹೇಳಿರಲಿಲ್ಲ. ಈ ಬಗೆಗೆ ಪರಿಶೀಲಿಸಲಾಗುವುದು' ಎಂದರು.

ಬಡಾವಣೆಯ ನಿವಾಸಿಯೊಬ್ಬರು, ಪ್ರತಿ ಬಾರಿ ನಿವಾಸಿಗಳ ಸಭೆ ನಡೆದಾಗಲೂ ರಸ್ತೆ ಸ್ಥಿತಿಯೇ ಪ್ರಮುಖವಾಗಿ ಚರ್ಚೆಗೆ ಬರಲಿದೆ. ನಗರಸಭೆಯು ಕೂಡಾ ಇದನ್ನು ನಿರ್ಲಕ್ಷಿಸಿದೆ.

ನಗರಸಭೆ ಕ್ರಮ ಕೈಗೊಳ್ಳದೇ ಇದ್ದರೆ ನಿವಾಸಿಗಳೇ ವೆಚ್ಚ ಭರಿಸಿ ದುರಸ್ತಿ ಮಾಡಿಕೊಳ್ಳಬೇಕಾದಿತೇನೋ' ಎನ್ನುತ್ತಾರೆ.
ಹಿಂದೆ ಹೀಗೇ ಆದರ್ಶ ನಗರದಲ್ಲಿ ನಿವಾಸಿಗಳೇ ರಸ್ತೆ ದುರಸ್ತಿಗೆ ಮುಂದಾದಾಗ ಅಧಿಕಾರಿಗಳು, ಶಾಸಕರು ಸ್ಥಳಕ್ಕೆ ಧಾವಿಸಿ ಸ್ಥಳೀಯ ಆಡಳಿತವೇ ದುರಸ್ತಿ ಕೈಗೊಳ್ಳಲು ಕ್ರಮ ವಹಿಸಿದ್ದರು.

ಈಗ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರು, ಹೆಚ್ಚಿನ ಬಡಾವಣೆಗಳಲ್ಲಿ ಗುಂಡಿಗಳಿಂದಲೇ ತುಂಬಿರುವ ರಸ್ತೆಗಳನ್ನು  ಕನಿಷ್ಠ ಬಳಕೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಅವರು ನಗರಸಭೆಗೆ ಚುರುಕು ಮುಟ್ಟಿಸುವರೇ?

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.