ಔರಾದ್: ರೈತರಿಗೆ ನೇರವಾಗಿ ಬರ ಪರಿಹಾರದ ಸೌಲಭ್ಯ ಸಿಗಬೇಕು ಎಂದು ರಾಜ್ಯ ರೈತ ಸಂಘ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದೆ.
ಗುರುವಾರ ತಾಲ್ಲೂಕಿನ ಬರಪೀಡಿತ ಗ್ರಾಮಗಳಿಗೆ ಹೋಗುತ್ತಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಕೌಠಾ ಬಳಿ ತಡೆದು ಬೇಡಿಕೆ ಪತ್ರ ಸಲ್ಲಿಸಿದರು.
ಸದ್ಯ ಕುಡಿಯುವ ನೀರು, ಮೇವಿನಂತಹ ಗಂಭೀರ ಸಮಸ್ಯೆಗಳ ಕಡೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಈಗಾಗಲೇ ಬಡ್ಡಿ ಮನ್ನಾ ಮಾಡಲು ತಿಳಿಸಲಾಗಿದೆ. ಮತ್ತು ರೈತರಿಗೆ ಹೊಸದಾಗಿ ಸಾಲ ನೀಡಲು ಸಂಬಂಧಿತ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ರೈತರಿಗೆ ಸಮಾಧಾನ ಮಾಡಿದರು. ಬೆಳೆ ಹಾನಿ ಪರಿಹಾರದ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಈ ವೇಳೆ ರೈತ ಮುಖಂಡ ವಿಶ್ವನಾಥ ಪಾಟೀಲ, ಪ್ರಕಾಶ ಬಾವುಗೆ, ಪ್ರಭುದಾಸ ಸಂತಪುರ, ಬಾಬುರಾವ ಕೃಷ್ಣಾಜಿ, ಸಿದ್ದಪ್ಪ ಬೀದರ್, ಸಿದ್ರಾಮಪ್ಪ ಅಣದೂರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಸರ್ಕಾರ ಕೇವಲ ಬರ ಘೋಷಣೆ ಮಾಡಿದರೆ ಸಾಲದು ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
ಬೆಳೆ ವಿಮೆ ಹಣ ತಕ್ಷಣ ಬಿಡುಗಡೆ ಮಾಡಬೇಕು. ಬೆಳೆ ಸಾಲ ಮನ್ನಾ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು. ಜಿಲ್ಲೆಯ ನೀರಾವರಿ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆವುಳ್ಳ ಮನವಿಪತ್ರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಬ್ಯಾರೇಜ್‌ಗೆ ಮನವಿ: ಮಾಂಜ್ರಾ ನದಿಗೆ ಅಡ್ಡಲಾಗಿ ಕೌಠಾ ಬಳಿ ಬ್ಯಾರೇಜ್ ನಿರ್ಮಿಸುವಂತೆಯೂ ಅಲ್ಲಿಯ ರೈತರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಮಾಂಜ್ರಾ ನದಿ ನೀರು ಕೌಠಾದಿಂದ ಮುಂದೆ ಆಂಧ್ರಕ್ಕೆ ಹರಿದು ಹೋಗುತ್ತಿದೆ. ಬ್ಯಾರೇಜ್ ನಿರ್ಮಿಸಿ ಈ ನೀರು ತಡೆದರೆ ಕೌಠಾ ಮತ್ತು ಸುತ್ತಲಿನ ಗ್ರಾಮಗಳ ರೈತರಿಗೆ ಮತ್ತು ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ, ಶಾಸಕ ಪ್ರಭು ಚವ್ಹಾಣ್ ಇತರರು ಈ ವೇಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.