ಬಸವಕಲ್ಯಾಣ: ಜೂನ್ 23 ರಂದು ಜೇಷ್ಠ ಮಾಸದ ಹುಣ್ಣಿಮೆ ಇದ್ದು, ಈ ದಿನದಂದು ಉತ್ತರ ಕರ್ನಾಟಕದ ಭಾಗದಲ್ಲಿ ರೈತರು ಕಾರಹುಣ್ಣಿಮೆ ಹಬ್ಬ ಆಚರಿಸುತ್ತಾರೆ. ಜತೆಗೆ ದೇಶದ ಬಹುಭಾಗದಲ್ಲಿ ನಡೆಸುವಂತೆ ವಟಸಾವಿತ್ರಿ ಪೂಜೆ ಸಹ ಕೈಗೊಳ್ಳುವ ವಾಡಿಕೆ ಇದೆ.
ವಟ ಎಂದರೆ ಆಲದ ಮರ. ಹಿಂದಿನ ಕಾಲದಲ್ಲಿ ಅಶ್ವಪತಿರಾಜನ ಮಗಳು ಸಾವಿತ್ರಿ ವರಾನ್ವೇಷಣೆ ಕೈಗೊಳ್ಳುತ್ತಾಳೆ. ಶಾಲ್ವದೇಶದ ರಾಜನ ಮಗ ಸತ್ಯವಾನ ಅಲ್ಪಾಯುಷಿ ಎಂಬುದು ತಿಳಿದಿದ್ದರೂ ಆತನ ಜತೆ ಮದುವೆ ಆಗುತ್ತಾಳೆ.
ಮುಂದೆ ಕಾಡಿನಲ್ಲಿ ಹೋಗುತ್ತಿರುವಾಗ ಯಮನು ಆತನ ಪ್ರಾಣ ತೆಗೆಯುತ್ತಾನೆ. ಆಗ ಆಕೆ ಶವವನ್ನು ಆಲದ ಮರದ ಕೆಳಗಿಟ್ಟು ಪರಿಪರಿಯಾಗಿ ಬೇಡಿಕೊಂಡು ಮತ್ತೆ ಪ್ರಾಣ ಬರುವಂತೆ ಮಾಡುತ್ತಾಳೆ.
ಆದ್ದರಿಂದ ಈ ದಿನ ಸುಮಂಗಲೆಯರು ಉಪವಾಸ ವ್ರತ ಕೈಗೊಂಡು ಕುಂಕುಮ, ಅರಿಷಿಣ ತೆಗೆದುಕೊಂಡು ಹೋಗಿ ಈ ವೃಕ್ಷಕ್ಕೆ ದಾರ ಸುತ್ತಿ ಪತಿಯ ಸೌಖ್ಯ ಬಯಸಿ ಪೂಜೆ ಸಲ್ಲಿಸುತ್ತಾರೆ. ತಮ್ಮ ವಂಶ ವೃಕ್ಷವೂ ಈ ವಟವೃಕ್ಷದಂತೆ ವಿಶಾಲವಾಗಿ ಬೆಳೆಯಲಿ, ಕುಟುಂಬದ ಸದಸ್ಯರು ದೀರ್ಘಾಯುಷಿಗಳಾಗಲಿ ಎಂದು ಪ್ರಾರ್ಥಿಸುತ್ತಾರೆ.
ಇನ್ನೊಂದು ಕತೆಯ ಪ್ರಕಾರ ಸತ್ಯವಾನನು ಕಾಡಿನಲ್ಲಿ ಹೋಗುತಿದ್ದಾಗ ಆತನಿಗೆ ಉಷ್ಮಾಘಾತವಾಗಿ ನೆಲಕ್ಕೆ ಬೀಳುತ್ತಾನೆ. ಆಗ ಅಲ್ಲಿಂದ ಹಾದು ಹೋಗುವವರ ಸಲಹೆಯಂತೆ ಆತನನ್ನು ಸಾವಿತ್ರಿ ವಟವೃಕ್ಷದ ಕೆಳಗೆ ತಂದು ಮಲಗಿಸುತ್ತಾಳೆ.
ಈ ಮರದ ಕೆಳಗೆ ಯಾವಾಗಲೂ ಆರ್ದ್ರತೆ ಇರುವುದರಿಂದ ಆತನಿಗೆ ಎಚ್ಚರವಾಗುತ್ತದೆ. ಆಕೆ ಈ ಮರವೇ ತನ್ನ ಗಂಡನನ್ನು ಉಳಿಸಿತು ಎಂದು ಅದರ ಪೂಜೆ ನೆರವೆರಿಸುತ್ತಾಳೆ. ಅಂದಿನಿಂದ ಇದಕ್ಕೆ ಪೂಜಿಸುವ ಪರಿಪಾಠ ಬೆಳೆದಿದೆ ಎನ್ನಲಾಗುತ್ತದೆ. ವೈಜ್ಞಾನಿಕ ಆಧಾರದ ಪ್ರಕಾರ ಈ ಮರ ಕಾರ್ಬನ್ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕವನ್ನು ಹೊರಸೂಸುತ್ತದೆ. ಆದ್ದರಿಂದ ಗಾಳಿ ಶುದ್ಧಗೊಳ್ಳುತ್ತದೆ. ಈ ಕಾರಣ ಈ ಮರದ ಕೆಳಗೆ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಹಿತಕರ ಎನ್ನಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.