ADVERTISEMENT

ವಿದೇಶಿ ಬಂಡವಾಳ ಹೂಡಿಕೆ ವಿರೋಧಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 5:31 IST
Last Updated 2 ಜುಲೈ 2013, 5:31 IST

ಬೀದರ್: ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ಸತ್ಯಾಗ್ರಹ ನಡೆಸಿದರು.

ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದರಿಂದ ಸಣ್ಣ ವ್ಯಾಪಾರಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಕೆಲ ನಿರ್ಧಾರಗಳು ರೈತ, ಕಾರ್ಮಿಕ ಹಾಗೂ ಜನವಿರೋಧಿಯಾಗಿವೆ ಎಂದು ದೂರಿದ್ದಾರೆ.

ಬಿಸಿಯೂಟ ಯೋಜನೆಯಲ್ಲಿ ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಅಡುಗೆ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಬಿಸಿಯೂಟ ಯೋಜನೆ ಹಾಗೂ ಸಿಬ್ಬಂದಿ ನೇಮಕ ಅಧಿಕಾರವನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಲು  ನಿರ್ಧರಿಸಿರುವುದರಿಂದ  ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ನೇಮಕದ ಹೊಣೆ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಬಾರದು ಎಂದೂ ಬೇಡಿಕೆ ಮಂಡಿಸಿದ್ದಾರೆ.

ಎಪಿಎಲ್ ಕಾರ್ಡುದಾರರಿಗೂ ಪಡಿತರ ವಿತರಣೆ ನೀಡಬೇಕು. ರೈತರಿಗೆ ಮಾಸಿಕ ರೂ. 3 ಸಾವಿರ ಮಾಸಾಶನ ಕೊಡಬೇಕು. ಕಾರ್ಮಿಕರಿಗೆ ನಿವೇಶನ, ಮನೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಸಬೇಕು. ತೊಗರಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಬುರಾವ್ ಹೊನ್ನಾ, ಸಹ ಕಾರ್ಯದರ್ಶಿ ಶಂಕರರಾವ್ ಕಮಠಾಣ, ಪ್ರಮುಖರಾದ ಜಗನ್ನಾಥ ಮಹಾರಾಜ್, ರಾಮಯ್ಯ ಮಠಪತಿ, ಪಾಂಡುರಂಗ ಪ್ಯಾಗೆ, ಖುದ್ದೂಸ್, ಖಾಜಾ ಮೈನೊದ್ದೀನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.