ADVERTISEMENT

ಶಿಕ್ಷಕರಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 12:38 IST
Last Updated 1 ಆಗಸ್ಟ್ 2013, 12:38 IST

ಔರಾದ್: ಖಾಲಿ ಇರುವ ಶಿಕ್ಷಕರ ಕೊರತೆ ತುಂಬುವಂತೆ ಆಗ್ರಹಿಸಿ ತಾಲ್ಲೂಕಿನ ಹೊಕ್ರಾಣಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳು ಮಂಗಳವಾರ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದರು.

ಬೆಳಿಗ್ಗೆಯಿಂದಲೇ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಪ್ರೌಢ ಶಾಲೆಯಲ್ಲಿ ಕನ್ನಡ, ಗಣಿತ ಮತ್ತು ವಿಜ್ಞಾನ ಶಿಕ್ಷಕರಿಲ್ಲದೆ ಕಲಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಣಮಂತ ಸೂರ್ಯವಂಶಿ ಹೇಳಿದರು. ಹೊಕ್ರಾಣಾ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಏಕೈಕ ಪ್ರೌಢ ಶಾಲೆ ಇದೆ. ಆದರೆ ಶಿಕ್ಷಕರಿಲ್ಲದ ಕಾರಣ ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಪರಿಣಾಮವಾಗುತ್ತಿದೆ ಎಂದು ದೂರಿದರು.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ, ಪಕ್ಕದ ಭಂಡಾರಕುಮಟಾ ಶಾಲೆ ಇಬ್ಬರು ಶಿಕ್ಷಕರಿಗೆ ಕಳುಹಿಸಿಕೊಡಲಾಗುವುದು. ಮತ್ತು ತಾತ್ಕಾಲಿಕವಾಗಿ ಕನ್ನಡ ಶಿಕ್ಷಕರ ನೇಮಕ ಮಾಡಲಾಗುವುದು ಎಂದು ಹೇಳಿದರು.

ಖಾಲಿ ಇರುವ ಮುಖ್ಯಗುರುಗಳ ಹುದ್ದೆ ತುಂಬಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಲಕ್ಷ್ಮಣ ಮಾನೆ, ಮಹೇಶ, ಅಶೋಕ, ರಾಮದಾಸ, ಪಂಢರಿನಾಥ ಸೇರಿದಂತೆ ಗ್ರಾಮದ ಪ್ರಮುಖರು, ಪಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.