ADVERTISEMENT

ಶೋಭೆ ಹೆಚ್ಚಿಸಿದ ಸ್ವಾಗತ ದ್ವಾರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 5:10 IST
Last Updated 17 ಏಪ್ರಿಲ್ 2012, 5:10 IST

ಬಸವಕಲ್ಯಾಣ: ಸಾಮಾಜಿಕ ಪರಿವರ್ತನೆಗೆ ಪ್ರಯತ್ನಿಸಿದ ಬಸವಾದಿ ಶರಣರ ಕಾಯಕಭೂಮಿಯಲ್ಲಿನ ಸ್ಮಾರಕಗಳನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಇತರೆ ವಿಕಾಸ ಕಾರ್ಯಗಳನ್ನು ಸಹ ಕೈಗೆತ್ತಿಕೊಳ್ಳಲಾಗಿದ್ದು ಇವುಗಳಲ್ಲಿ ಸಸ್ತಾಪುರ ರಸ್ತೆಯಲ್ಲಿ ನಿರ್ಮಿಸುತ್ತಿರುವ ಭವ್ಯ ಮತ್ತು ಆಕರ್ಷಕ ಸ್ವಾಗತ ದ್ವಾರದ ಕೆಲಸ ಪೂರ್ಣಗೊಂಡಿದ್ದು ಇದರಿಂದ ಇಲ್ಲಿನ ಶೋಭೆ ಹೆಚ್ಚಿದೆ.

ಹಾಗೆ ನೋಡಿದರೆ, ಇಲ್ಲಿನ ಸ್ವಾಗತ ದ್ವಾರದ ವಿನ್ಯಾಸವನ್ನು 15 ವರ್ಷಗಳಲ್ಲಿ ಮೂರು ಸಲ ಬದಲಾಯಿಸಲಾಗಿದೆ. ಮೊದಲು ಶಾಸಕರ ನಿಧಿಯ 12 ಲಕ್ಷ ರೂಪಾಯಿಗಳಲ್ಲಿ ದ್ವಾರದ ಕಾಮಗಾರಿ ನಡೆಸಲಾಯಿತು. ಆದರೆ ನಂತರ ಅದು ಚಿಕ್ಕದಾಗಿದ್ದರಿಂದ ಒಡೆದು ಎರಡು ಕಮಾನುಗಳುಳ್ಳ ದ್ವಾರ ಕಟ್ಟಲಾಯಿತು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಮೊದಲಿನ 37 ಅಡಿ ಎತ್ತರದ ಕಮಾನುಗಳನ್ನು ಹಾಗೆಯೇ ಉಳಿಸಿಕೊಂಡು ಅದರ ಎತ್ತರವನ್ನು 100 ಅಡಿಗೆ ಹೆಚ್ಚಿಸಲು ನಿರ್ಧರಿಸಲಾಯಿತು.

ಸಿಮೆಂಟ್ ಮತ್ತು ಕಬ್ಬಿಣದ ಸಲಾಕೆಗಳನ್ನು ಬಳಸಿ ಕಳೆದ 6 ವರ್ಷಗಳಿಂದ ಇದರ ನಿರ್ಮಾಣಕಾರ್ಯ ನಡೆದಿದೆ. ಸಣ್ಣಪುಟ್ಟ ಕೆಲಸ ಬಿಟ್ಟರೆ ಇತರೆ ಎಲ್ಲ ಕೆಲಸ ಮುಗಿದಿದ್ದು ಇದರ ಲೋಕಾರ್ಪಣೆಗೆ ಸಿದ್ಧತೆ ನಡೆದಿದೆ. ಐದಂತಸ್ತಿನ ಈ ದ್ವಾರದ ಕಟ್ಟಡಕ್ಕೆ 1.81 ಕೋಟಿ ರೂಪಾಯಿ ಖರ್ಚಾಗಿದೆ. ದ್ವಾರದ ಮುಂಭಾಗದಲ್ಲಿ ಮತ್ತು ಹಿಂಭಾಗದ ರಸ್ತೆಯಲ್ಲಿ ಉದ್ಯಾನವನ ನಿರ್ಮಿಸಲಾಗಿದೆ.

ಎರಡೂ ಕಡೆಯ ಕಮಾನುಗಳಿಂದ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಮಧ್ಯದಲ್ಲಿನ ಕಮಾನಿನಲ್ಲಿ ಜಗಜ್ಯೋತಿ ಬಸವೇಶ್ವರರ ಕಂಚಿನ ಅಶ್ವಾರೂಢ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ರಸ್ತೆಯ ಎರಡೂ ಕಡೆ 6 ಅಡಿ ಎತ್ತರದ ಆವರಣಗೋಡೆ ಕಟ್ಟಲಾಗಿದೆ. ಈ ಗೋಡೆಯ ಮೇಲೆ ಇಲ್ಲಿನ ಎಲ್ಲ ಶರಣ ಸ್ಮಾರಕಗಳ ತೈಲಚಿತ್ರಗಳನ್ನು ಬಿಡಿಸಲಾಗುತ್ತಿದೆ.

ಈ ದ್ವಾರದ ನಿರ್ಮಾಣದಿಂದ 9 ನೇ ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ರಸ್ತೆಯಲ್ಲಿನ ವೃತ್ತದ ಸೌಂದರ್ಯ ಹೆಚ್ಚಿದೆ. ಇಲ್ಲಿನ ಬಸವೇಶ್ವರ ಪ್ರತಿಮೆಯ ಅನಾವರಣ ಮತ್ತು ದ್ವಾರದ ಉದ್ಘಾಟನಾ ಕಾರ್ಯಕ್ರಮ ಶೀಘ್ರ ಹಮ್ಮಿಕೊಳ್ಳಲು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಸಿದ್ಧತೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.