ADVERTISEMENT

ಶೌಚಾಲಯ ನಿರ್ಮಾಣ ಅಕ್ರಮ: ವರದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 6:25 IST
Last Updated 22 ಜೂನ್ 2011, 6:25 IST

ಬೀದರ್: ಜಿಲ್ಲೆಯ ಅಂಗನವಾಡಿಗಳ ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಎಲ್ಲ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಶೌಚಾಲಯ ಕಟ್ಟಿಸಲಾಗಿದೆ ಎಂದು ಸಂಪೂರ್ಣ ಸ್ವಚ್ಚತಾ ಆಂದೋಲನದ ನೋಡಲ್ ಅಧಿಕಾರಿ ನೀಡಿದ ಮಾಹಿತಿಗೆ ಪ್ರತಿಕ್ರಿಯಿಸಿದ ಶಾಸಕ ಈಶ್ವರ ಖಂಡ್ರೆ ಇದು ಸತ್ಯಕ್ಕೆ ದೂರವಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಬಹಳಷ್ಟು ಅಂಗನವಾಡಿಗಳಲ್ಲಿ ಶೌಚಾಲಯಗಳಿಲ್ಲ. ಶೇ. 50 ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿಲ್ಲ ಎಂದು ದೂರಿದರು.

ಈ ಕುರಿತು ಕಾಲಮಿತಿ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಭಾಲ್ಕಿ ತಾಲ್ಲೂಕಿನ 338 ಅಂಗನವಾಡಿಗಳ ಪೈಕಿ 49 ಅಂಗನವಾಡಿಗಳಲ್ಲಿ ಶೌಚಾಲಯ ಇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ದೊರೈಸ್ವಾಮಿ ತಿಳಿಸಿದರು.ಸುವರ್ಣ ಗ್ರಾಮೋದಯ: ಸುವರ್ಣ ಗ್ರಾಮೋದಯ ಯೋಜನೆ ಅಡಿ ಜಿಲ್ಲೆಯಲ್ಲಿ ಇದುವರೆಗೆ ನಾಲ್ಕು ಹಂತಗಳಲ್ಲಿ 197 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಆಯ್ಕೆಯಾದ ಎಲ್ಲ 49 ಗ್ರಾಮಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ 35 ಗ್ರಾಮಗಳನ್ನು ಅಯ್ಕೆ ಮಾಡಲಾಗಿದ್ದು, 29 ಪೂರ್ಣಗೊಂಡಿವೆ.

ಮೂರನೇ ಹಂತದಲ್ಲಿ 46 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ರಸ್ತೆ ಮತ್ತು ಚರಂಡಿ ಕಾಮಗಾರಿ ಆರಂಭಿಕ ಹಂತದಲ್ಲಿವೆ. ಈ ಯೋಜನೆ ಅಡಿ ಇದುವರೆಗೆ 67 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, 59 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿತೇಂದ್ರ ನಾಯಕ್ ಹೇಳಿದರು.

ಎಸ್‌ಜಿಎಸ್‌ವೈ: ಸುವರ್ಣ ಗ್ರಾಮ ಸ್ವರಾಜ್ ಯೋಜನೆ ಅಡಿ 286 ಗುಂಪುಗಳನ್ನು ಗುರುತಿಸಲಾಗಿದ್ದು, 204 ಗುಂಪುಗಳಿಗೆ ತರಬೇತಿ ನೀಡಲಾಗಿದೆ. 260 ಗುಂಪುಗಳಿಗೆ ಸಾಲಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.
ಸಾಲ ಒದಗಿಸಲು ವಿಳಂಬ ಮಾಡಬಾರದು. ಈ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಉದ್ಯೋಗ ಖಾತರಿ : ಉದ್ಯೋಗ ಖಾತರಿ ಯೋಜನೆ ಅಡಿ 2010-11ನೇ ಸಾಲಿನಲ್ಲಿ  96,097 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. 4,500 ಕುಟುಂಬಗಳಿಗೆ 100 ದಿನಗಳ ಪೂರ್ಣ ಉದ್ಯೋಗ ನೀಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಉಪಾಧ್ಯಕ್ಷ ತಾನಾಜಿ ಧನಸಿಂಗ್ ರಾಠೋಡ್, ಶಾಸಕರಾದ ಕಾಜಿ ಅರ್ಷದ್ ಅಲಿ, ರಾಜಶೇಖರ ಪಾಟೀಲ್, ಪ್ರಭು ಚವ್ಹಾಣ್, ಈಶ್ವರ ಖಂಡ್ರೆ, ಸ್ಥಾಯಿ ಸಮಿತಿ ಅಧ್ಯಕ್ಷರು, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.