ಬಸವಕಲ್ಯಾಣ: ಹುಲಸೂರ ಶಿವಾನಂದ ಸ್ವಾಮಿಯವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೈಗೊಂಡ ಬಸವಜ್ಯೋತಿ ಸದ್ಭಾವನಾ ಪಾದಯಾತ್ರೆ ಸೋಮವಾರ ಇಲ್ಲಿಂದ ಆರಂಭವಾಯಿತು. ಬೆಳಿಗ್ಗೆ ವಿಜಾಪುರ ಸಿದ್ಧೇಶ್ವರ ಸ್ವಾಮೀಜಿ ಜ್ಯೋತಿ ಬೆಳಗಿಸಿ ಯಾತ್ರೆಗೆ ಚಾಲನೆ ಕೊಟ್ಟರು.ನಂತರ ಮಾತನಾಡಿದ ಅವರು ಪಾದಯಾತ್ರೆಯಿಂದ ಹುಲಸೂರ ಶಿವಾನಂದ ಸ್ವಾಮಿ ಅವರು ಹೊಂದಿರುವ ಬಸವತತ್ವ ಪ್ರಚಾರದ ಉದ್ದೇಶ ಸಫಲವಾಗಲಿ ಎಂದು ಹಾರೈಸಿದರು.
ಹುಲಸೂರ ಶಿವಾನಂದ ಸ್ವಾಮಿ ಮಾತನಾಡಿ ಒಟ್ಟು 9 ತಿಂಗಳವರೆಗೆ ಪಾದಯಾತ್ರೆ ನಡೆಸಲಾಗುತ್ತದೆ. ಬಸವಣ್ಣನವರ ಕುರಿತು ಸಾವಿರ ಗ್ರಂಥಗಳು, ವಚನದ ಕ್ಯಾಸೆಟ್‌ಗಳನ್ನು ಜೊತೆಯಲ್ಲಿ ಒಯ್ಯಲಾಗುತ್ತಿದ್ದು ಅವುಗಳನ್ನು ಅಲ್ಲಲ್ಲಿ ವಿತರಿಸಲಾಗುವುದು. ಗ್ರಾಮಸ್ಥರಿಗೆ ಬಸವತತ್ವದ ಮಾಹಿತಿ ಕೊಡಲಾಗುವುದು ಎಂದು ತಿಳಿಸಿದರು.
ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ ಅವರು ಶಿವಾನಂದ ಸ್ವಾಮಿ ಅವರಿಗೆ ಸತ್ಕರಿಸಿ ಬೀಳ್ಕೊಟ್ಟರು. ಸಾಯಗಾಂವ ಶಿವಾನಂದ ದೇವರು, ಪ್ರಮುಖರಾದ ಗದಗೆಪ್ಪ ಹಲಶೆಟ್ಟಿ, ರಾಜಕುಮಾರ ಹೊಳಕುಂದೆ, ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶಶಿಕಾಂತ ದುರ್ಗೆ, ಕಾಶಪ್ಪ ಸಕ್ಕರಬಾವಿ, ಮಲ್ಲಿಕಾರ್ಜುನ ಚಿರಡೆ ಇದ್ದರು. ವೈಜನಾಥ ಕಾಮಶೆಟ್ಟಿ ಸ್ವಾಗತಿಸಿದರು. ವಿಶ್ವನಾಥ ಮುಕ್ತಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.