ADVERTISEMENT

ಸಮಾಜಮುಖಿ ಸೇವೆಗೆ ಕರೆ

ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 8:01 IST
Last Updated 15 ಡಿಸೆಂಬರ್ 2012, 8:01 IST

ಬೀದರ್: ಪೊಲೀಸ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ 6ನೇ ತಂಡದ ನಾಗರಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಶುಕ್ರವಾರ ನಡೆದಿದ್ದು, ಈ ಮೂಲಕ ತರಬೇತಿಯನ್ನು ಪೂರ್ಣಗೊಳಿಸಿದ 148 ಸಿಬ್ಬಂದಿ ಪೊಲೀಸ್ ಸೇವೆಗೆ ಸಜ್ಜಾದರು.

ನಿರ್ಗಮನ ಪಥ ಸಂಚಲನದಲ್ಲಿ ವಂದನೆ ಸ್ವೀಕರಿಸಿದ ಆರಕ್ಷಕ ಮಹಾ ನಿರೀಕ್ಷಕ (ತರಬೇತಿ) ಡಾ.ಎಸ್.ಪರಶಿವಮೂರ್ತಿ, `ಜನರ ಜೊತೆಗೆ ನೇರವಾಗಿ ಬೆರೆಯುವ ಪೇದೆಗಳು ಸೇವೆಯ ಹಂತದಲ್ಲಿ ಉತ್ತಮ ವರ್ತನೆ ತೋರುವ ಮೂಲಕ ಇಲಾಖೆ ಗೌರವ ಹೆಚ್ಚಿಸಬೇಕು' ಎಂದರು.

`ಪೊಲೀಸ್ ಸೇವೆಗೆ ಬರುತ್ತಿದ್ದೀರಿ. ಜನರ ಸೇವೆಗೇ ಹೆಚ್ಚು ತೊಡಗಬೇಕಾಗುತ್ತದೆ. ಈ ಹಂತದಲ್ಲಿ ಕೌಟುಂಬಿಕ ಸಂಬಂಧಗಳ ಜೊತೆಗೂ ಗಮನಹರಿಸುತ್ತಾ, ತಮ್ಮ ಕೃತಿಯ ಮೂಲಕ ವೈಯಕ್ತಿಕ ಮತ್ತು ಇಲಾಖೆಯ ವರ್ಚಸ್ಸು ಹೆಚ್ಚಿಸಲು ಮುಂದಾಗಬೇಕು' ಎಂದು ಕರೆ ನೀಡಿದರು.

ಪೊಲೀಸ್ ಅಂಥ ಉನ್ನತ ಸೇವೆಗೆ ಪಾದಾರ್ಪಣೆ ಮಾಡುತ್ತಿದ್ದೀರಿ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸೇವೆ ಸಲ್ಲಿಸುವ, ಸಮಾಜ ಮುಖಿ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ತಮ್ಮ ಸೇವೆಯ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಬೇಕು ಎಂದರು.
ಕೇಂದ್ರ ವಲಯದ 50, ಆಗ್ನೇಯ ವಲಯದ 52 ಮತ್ತು ಪಶ್ಚಿಮ ವಲಯದ 44 ಸಿಬ್ಬಂದಿ ತರಬೇತಿ ಪೂರೈಸಿದ ಈ ತಂಡದಲ್ಲಿ ಇದ್ದರು. ಸಿಆರ್‌ಪಿಸಿ, ಐಪಿಸಿ, ಪೊಲೀಸ್ ಆಡಳಿತ, ಕಾನೂನು ರಕ್ಷಣೆ, ಇಲಾಖಾ ವ್ಯವಸ್ಥೆ ಮತ್ತಿತರ ಅಂಶಗಳ ಕುರಿತು ತರಬೇತಿ ನೀಡಲಾಯಿತು.

ಪ್ರಶಸ್ತಿ: ಇದೇ ಸಂದರ್ಭದಲ್ಲಿ ತರಬೇತಿ ಹಂತದಲ್ಲಿ ಉತ್ತಮ ಸೇವೆಯ ಮೂಲಕ ಅಧಿಕ ಅಂಕ ಗಳಿಸಿದ ಎಚ್.ಎಸ್.ಮಹೇಶ್, ಖಾದೀರ್, ಸಂತೋಷ್, ಭೀಮರಾವ್, ರಮೇಶ್, ಭೀಮಣ್ಣ ಅವರಿಗೆ ಇದೇ ಸಂದರ್ಭದಲ್ಲಿ ಪಾರಿತೋಷಕ ನೀಡಿ ಗೌರವಿಸಲಾಯಿತು.

ಪೊಲೀಸ್ ವರಿಷ್ಠಾಧಿಕಾರಿ ಕೆ.ತ್ಯಾಗರಾಜನ್, ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರೂ ಆದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಮರ್ತೂರಕರ್ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.