ಬಸವಕಲ್ಯಾಣ: ತಾಲ್ಲೂಕಿನ ಸಸ್ತಾಪುರದಲ್ಲಿ ಬುಧವಾರ ಸಂಜೆ ಶರಣ ಶಿವಲಿಂಗೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ನೆರವೆರಿತು.
ಈ ಸಂದರ್ಭದಲ್ಲಿ ಸುತ್ತಲಿನ ಗ್ರಾಮಗಳ ಅಪಾರ ಭಕ್ತಸಮೂಹ ಪಾಲ್ಗೊಂಡಿತ್ತು. ಹಾರಕೂಡ ಚೆನ್ನವೀರ ಶಿವಾಚಾರ್ಯರು ಪೂಜೆ ಸಲ್ಲಿಸಿ ಚಾಲನೆ ಕೊಟ್ಟರು. ಮಠಾಧಿಪತಿ ಸದಾನಂದ ಅಪ್ಪಗಳು ನೇತೃತ್ವ ವಹಿಸಿದ್ದರು.
ರಾಜಕೀಯ ಮತ್ತು ಧಾರ್ಮಿಕ ಮುಖಂಡರು, ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು. ನಂತರ ಶಿವಲಿಂಗೇಶ್ವರ ಮಹಾರಾಜ ಕೀ ಜೈ ಎನ್ನುತ್ತ ಭಕ್ತರು ರಥ ಎಳೆದರು. ಪಟಾಕಿ ಸಹ ಸಿಡಿಸಲಾಯಿತು.
ನಂತರ ದಾನವಿಲ್ಲದಿದ್ದರೆ ಮನ ದೊಡ್ಡದಾದರೇನು ಎಂಬ ವಿಷಯ ಕುರಿತು ಪ್ರವಚನ ನಡೆಯಿತು.
ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ ಪ್ರವಚನ ಹೇಳಿದರು. ಸರ್ಕಾರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು `ಸಾವಿರ ಮುತ್ತು~ ನಾಟಕ ಪ್ರದರ್ಶಿಸಲಾಯಿತು.
ಬೆಳಿಗ್ಗೆ ಶಿವಲಿಂಗೇಶ್ವರ ಶಿಲಾ ಮೂರ್ತಿಗೆ ರುದ್ರಪೂಜೆ ನೆರವೆರಿಸಲಾಯಿತು. ರುದನೂರ ದೇವಾನಂದ ಸ್ವಾಮೀಜಿ ಕಳಸಾರೋಹಣ ನೆರವೆರಿಸಿದರು. ಮಧ್ಯಾಹ್ನ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಸಕಲ ವಾದ್ಯ ಮತ್ತು ಕುಂಭಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಪುರವಂತರು ಶಕ್ತಿ ಪ್ರದರ್ಶಿಸಿದರು. ಎರಡು ದಿನಗಳಿಂದ ಜಾತ್ರೆ ನಡೆಯುತ್ತಿದ್ದು ಮಂಗಳವಾರ ಮಠದ ಆವರಣದಲ್ಲಿನ ಸರಸ್ವತಿ, ಭುವನೇಶ್ವರಿ ಮತ್ತು ನವಗ್ರಹ ದೇವತೆಗಳ ದೇವಸ್ಥಾನದಲ್ಲಿ ವಿಶೇಷ ಪೂಜೆ, ಬಿಲ್ವಾರ್ಚನೆ, ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. ಪ್ರಮುಖರಾದ ಮಡಿವಾಳಪ್ಪ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಬಾಬುರೆಡ್ಡಿ ಚಾಮಲ್ಲೆ, ಸಾಯಿರೆಡ್ಡಿ, ಕಿಶೋರ ಮುಳೆ, ಜೀತೇಂದ್ರಸಿಂಗ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.