ADVERTISEMENT

ಸಹಕಾರ ಸಂಸ್ಥೆಗಳಿಗೆ ತೆರಿಗೆ: ವಿರೋಧ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 9:00 IST
Last Updated 4 ಮಾರ್ಚ್ 2011, 9:00 IST

ಬೀದರ್: ಸಹಕಾರ ಬ್ಯಾಂಕ್ ಹಾಗೂ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ನೇರ ತೆರಿಗೆ ವಿಧೇಯಕ ಜಾರಿಗೊಳಿಸುವುದಕ್ಕೆ ಜಿಲ್ಲಾ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಅವರ ನೇತೃತ್ವದ ನಿಯೋಗ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಮಾಣಿಕಪ್ಪ ಮಂಗಲಗಿ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿತು.

ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಯ ಸಾಧನ ಆಗಿರುವ ಸಹಕಾರ ಕ್ಷೇತ್ರಕ್ಕೆ ನೇರ ತೆರಿಗೆ ವಿಧೇಯಕ ಜಾರಿಗೊಳಿಸುವ ಮೂಲಕ ಕೊಡಲಿ ಏಟು ಹಾಕುವುದು ಸರಿಯಲ್ಲ ಎಂದು ರಾಷ್ಟಪತಿಗಳಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಸದ್ಯ ರಾಜ್ಯದಲ್ಲಿ 36 ಸಾವಿರಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಕೃಷಿಕರು, ಕೂಲಿಕಾರ್ಮಿಕರು, ಹಿಂದುಳಿದವರು ಹಾಗೂ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಈ ಪೈಕಿ 19,318 ಸಹಕಾರ ಸಂಘಗಳು ಮಾತ್ರ ಲಾಭದಲ್ಲಿವೆ ಎಂದು ಹೇಳಿದ್ದಾರೆ.

ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಒಟ್ಟು 1 ಲಕ್ಷ 98 ಸಾವಿರ ಸದಸ್ಯರಿದ್ದಾರೆ. 3,171 ಕೋಟಿ ಬಂಡವಾಳ ಮತ್ತು 11,548 ಕೋಟಿ ರೂಪಾಯಿ ಠೇವಣಿ ಇದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಹಕಾರ ಚಳುವಳಿಕೆ ಹೆಚ್ಚಿನ ಒತ್ತು ಕೊಡಲಾಗಿದೆ. ವೈದ್ಯನಾಥನ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಸ್ವಾಯತ್ತತೆ ನೀಡಿ ನಿಷ್ಕೃಿಯಗೊಂಡಿದ್ದ ಅನೇಕ ಸಹಕಾರ ಸಂಸ್ಥಗಳನ್ನು ಪುನಶ್ಚೇತನಗೊಳಿಸಲಾಗಿದೆ. ಕೋಲಾರ, ಬೆಂಗಳೂರು, ಧಾರವಾಡ, ಬೀದರ್ ಹಾಗೂ ಗುಲ್ಬರ್ಗ ಡಿಸಿಸಿ ಬ್ಯಾಂಕ್‌ಗಳ ಅಭಿವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ತೆರಿಗೆ ವಿಧೇಯಕ ಜಾರಿಗೊಳಿಸುವುದರಿಂದ ಸಹಕಾರ ಕ್ಷೇತ್ರಕ್ಕೆ ಹಿನ್ನಡೆ ಆಗಿ ಜನಸಾಮಾನ್ಯರ ಅಭಿವೃದ್ಧಿಗೆ ತೊಂದರೆ ಆಗಲಿದೆ. ಹೀಗಾಗಿ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಲಾಗುತ್ತದೆ ಎಂದು ಹೇಳಿದ್ದಾರೆ.ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಶೋಕಕುಮಾರ ಹೊಕ್ರಾಣೆ, ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಎಸ್. ಪಾಟೀಲ್ ಗಾದಗಿ, ಪ್ರಮುಖರಾದ ಮಹಾರುದ್ರ ಹೂಗಾರ, ರಾಜಕುಮಾರ ಚಿದ್ರಿ, ಶಿವಪುತ್ರ ವೈದ್ಯ, ರಾಜು ಬಿರಾದಾರ, ಹಣಮಂತ ಬುಳ್ಳಾ, ಅನೀಲ ಉಪ್ಪೆ, ರವಿ ಕೆಂಪಯ್ಯ, ಸಂಜು ಸ್ವಾಮಿ, ಅಜಮದ ಅಲಿ ಮತ್ತಿತರರು ನಿಯೋಗದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.