ADVERTISEMENT

‘ಸಾಂಸ್ಕೃತಿಕ ಉತ್ಸವಗಳಿಂದ ಬಾಂಧವ್ಯ ವೃದ್ಧಿ’

ಅಖಿಲ ಭಾರತ ಲೋಕ ಕಲಾ ಮಹೋತ್ಸವ: ರಂಗಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 6:33 IST
Last Updated 14 ಮಾರ್ಚ್ 2018, 6:33 IST
ಅಖಿಲ ಭಾರತ ಲೋಕ ಕಲಾ ಮಹೋತ್ಸವದಲ್ಲಿ ಮಕ್ಕಳು ಮಲ್ಲಗಂಬ ಪ್ರದರ್ಶನ ನೀಡಿದರು
ಅಖಿಲ ಭಾರತ ಲೋಕ ಕಲಾ ಮಹೋತ್ಸವದಲ್ಲಿ ಮಕ್ಕಳು ಮಲ್ಲಗಂಬ ಪ್ರದರ್ಶನ ನೀಡಿದರು   

ಬೀದರ್: ‘ಸಾಂಸ್ಕೃತಿಕ ಉತ್ಸವಗಳಿಂದ ಜಾತಿ, ಧರ್ಮಗಳ ನಡುವಿನ ಸಂಘರ್ಷ ನಿವಾರಣೆಗೊಂಡು ಬಾಂಧವ್ಯ ವೃದ್ಧಿಯಾಗುತ್ತದೆ. ಆದ್ದರಿಂದ ಸಾಂಸ್ಕೃತಿಕ ಉತ್ಸವಗಳನ್ನು ನಿರಂತರವಾಗಿ ನಡೆಸಬೇಕು’ ಎಂದು ಕೇಂದ್ರದ ಸಂಸ್ಕೃತಿ ಸಚಿವಾಲಯದ ಭಾರತೀಯ ಜನಪದ ಕಲೆಗಳ ತಜ್ಞರ ಸಮಿತಿ ಸದಸ್ಯ ಟಿ.ವಿ. ರಂಗಯ್ಯ ಹೇಳಿದರು.

ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್‌, ಕೇಂದ್ರದ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ಸಾಹಸ ಕಲಾ ಅಕಾಡೆಮಿಹಾಗೂ ಹೈದರಾಬಾದ್‌ ಭಾಷೆ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನೆರೆಯ ತೆಲಂಗಾಣದ ಮಾಮುಡಗಿ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ ಅಖಿಲ ಭಾರತ ಲೋಕ ಕಲಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ದೇಶದ ಅನೇಕ ಕಡೆ ಜಾತಿ, ಧರ್ಮಗಳ ನಡುವೆ ಸಂಘರ್ಷ, ರಾಜ್ಯಗಳ ಮಧ್ಯೆ ಜಲ ಕಲಹ ನಡೆದು ಪ್ರಾದೇಶಿಕ ವೈಷಮ್ಯ ಹೆಚ್ಚಾಗಿದೆ. ಇದನ್ನು ನಿವಾರಿಸಲು ವೈವಿಧ್ಯಮಯವಾದ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸಬೇಕು. ಒಡೆದು ಹೋದ ಮನಸ್ಸುಗಳನ್ನು ಒಂದುಗೂಡಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆ ಹೊಂದಿರುವ ರಾಷ್ಟ್ರ ನಮ್ಮದು. ಹೀಗಾಗಿ ಭಾರತ ಜಾಗತಿಕ ಮಟ್ಟದಲ್ಲಿ ಅಪರೂಪದ ತಾಣ ಎನಿಸಿದೆ’ ಎಂದರು. ‘ರಾಷ್ಟ್ರೀಯ ಏಕತೆ ಸಾಧಿಸಲು ಜಾನಪದ ಕಲೆಗಳು ಪೂರಕವಾಗಿವೆ’ ಎಂದು ಹೇಳಿದರು.

ಅಂತರರಾಷ್ಟ್ರೀಯ ಜಾನಪದ ಕಲಾವಿದ ವಿಶ್ವಕರ್ಮ ಡಿ.ಆರ್.ಕೆ ಮಾತನಾಡಿ, ’ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕೆಲ ಧಾರವಾಹಿಗಳು ಮಾನವನ ವ್ಯಕ್ತಿತ್ವಕ್ಕೆ ಮಾರಕವಾಗಿವೆ. ದೃಷ್ಟಿದೋಷ ಹಾಗೂ ಮರೆಯುವಿಕೆಯಂತಹ ರೋಗಗಳಿಗೆ ಕಾರಣವಾಗುತ್ತಿವೆ. ಜಾನಪದ ಕಲೆಗಳು ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕರಿಸುತ್ತವೆ. ಇಂಥ ಕಲೆಗಳನ್ನು ಗ್ರಾಮೀಣ ಭಾಗಕ್ಕೆ ಸೀಮಿತಗೊಳಿಸದೆ ನಗರದ ಪ್ರದೇಶಗಳಿಗೂ ತಲುಪಿಸುವ ಕಾರ್ಯ ನಡೆಯಲಿ’ ಎಂದರು.

ರಾಮನಗರ ಸಾಹಸ ಕಲಾ ಅಕಾಡೆಮಿ ಸಂಸ್ಥಾಪಕ ಹಾಸನ ರಘು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶಾರದಾ ಭಾಸ್ಕರ್ ರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚಂದ್ರಮ್ಮ ಚಿಂತಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಣೆಮ್ಮ ತುಕ್ಕಾರೆಡ್ಡಿ, ಬಜರಂಗದಳದ ಅಧ್ಯಕ್ಷ ಓಂಕಾರ ಯಾದವ ಇದ್ದರು.

ರಾಷ್ಟ್ರೀಯ ಜಾನಪದ ಬುಡಕಟ್ಟು ಮತ್ತು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶರಣಪ್ಪ ಗಣೇಶಪುರ ಸ್ವಾಗತಿಸಿದರು. ತುಕ್ಕಾರೆಡ್ಡಿ ನಿರೂಪಿಸಿದರು. ಪ್ರಕಾಶ ಕನ್ನಾಳೆ ವಂದಿಸಿದರು.

ಸ್ಥಳೀಯ ಕಲಾವಿದರಾದ ಮೋಹನಪ್ಪ ಪಾಂಚಾಳ, ಬಕ್ಕಪ್ಪ ಕೋರನಾ, ಮಲ್ಲಪ್ಪ ಬಿರಾದಾರ, ಚಂದ್ರಪ್ಪ ಬಿರಾದಾರ, ಲಕ್ಷ್ಮಿ ಹಿಪ್ಪಳಗಾಂವ್‌, ವೀರಶೆಟ್ಟಿ ಹಿಪ್ಪಳಗಾಂವ್‌ ಅವರಿಗೆ ಲೋಕ ಕಲಾ ಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಲ್ಲಗಂಬ ಪ್ರದರ್ಶನ, ಪೂಜಾ ಕುಣಿತ, ಡೊಳ್ಳು ಕುಣಿತ, ದೊಣ್ಣೆ ವರಸೆ, ಯೋಗಾಸನ, ತೆಲಂಗಾಣದ ಯಕ್ಷಗಾನ, ವಗ್ಗು ಕಥಾ, ಸಿರಿಗರ ದಾಸಯ್ಯ ಕೀರ್ತನೆ, ಮಹಾರಾಷ್ಟ್ರದ ಸಾಮ್ರಾಟ ತಂಡದ ಭವಾನಿ ನೃತ್ಯ, ಬೀದರ್‌ನ ಓಂ ಡಾನ್ಸ್ ಅಕಾಡೆಮಿಯ ಕಲಾವಿದರ ಸುಗ್ಗಿ ಕುಣಿತ, ಜಾನಪದ ನೃತ್ಯ ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ಬದಕಮ್ಮ ನೃತ್ಯ, ಗುಜರಾತಿ ಕುಣಿತ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.