ADVERTISEMENT

ಸಾಹಿತ್ಯ ಮಾನವೀಯ ಮೌಲ್ಯಗಳ ಪ್ರತಿಬಿಂಬ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 5:46 IST
Last Updated 24 ಅಕ್ಟೋಬರ್ 2017, 5:46 IST

ಬೀದರ್‌: ‘ಆಧುನಿಕತೆಯ ಪರಿಣಾಮ ಒತ್ತಡದಲ್ಲಿ ಬದುಕುತ್ತಿರುವ ಇಂದಿನ ಸಮಾಜಕ್ಕೆ ಸಾಹಿತ್ಯ ನೆಮ್ಮದಿ ಒದಗಿಸಬಲ್ಲದು. ಕಾರಣ ಸಾಹಿತ್ಯವು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ವಿದ್ಯಾ ಪಾಟೀಲ ಹೇಳಿದರು. ಕದಂಬ ಕನ್ನಡ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮಹಿಳಾ ಕವಿಗೋಷ್ಠಿ’ ಉದ್ಘಾಟಿಸಿ ಮಾತನಾಡಿದರು.

ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಮಾತನಾಡಿ, ‘ಕನ್ನಡ ಕೇವಲ ಭಾಷೆಯಷ್ಟೇ ಅಲ್ಲ, ನಮ್ಮ ಬದುಕು. ಆದ್ದರಿಂದ ಕನ್ನಡದ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ‘ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕಾವ್ಯದ ಪಾತ್ರ ದೊಡ್ಡದಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದು ಹೇಳಿದರು.

ADVERTISEMENT

ಜಗದೇವಿ ದುಬಲಗುಂಡೆ ‘ವೀರ ಯೋಧರ ಪತ್ನಿಯರಿಗೆ ಶರಣು’, ಪುಷ್ಪ ಕನಕ ‘ಆಧುನಿಕ ಚುಟುಕಗಳು’, ಪಾರ್ವತಿ ಸೊನಾರೆ ‘ಅವ್ವ ಕಳುಹಿಸಿ ಕೊಡು ನನಗೊಮ್ಮೆ’, ವಿಜಯಲಕ್ಷ್ಮಿ ಕೌಟಗೆ ‘ಕತ್ತಲೆಯಿಂದ ಬೆಳಕಿನೆಡೆಗೆ’, ರೇಣುಕಾ ಎನ್.ಬಿ ‘ನೀನಿರದೆ’, ಭಾನುಪ್ರಿಯ ಅರಳಿ ‘ಸ್ವಚ್ಛ ಭಾರತ’, ಮತ್ತು ವೀರೇಶ್ವರಿ ಮೂಲಗೆ ‘ಅಕ್ಕಮಹಾದೇವಿಯ ಬದುಕು’ ಶೀರ್ಷಿಕೆಯ ಕವನಗಳನ್ನು ವಾಚಿಸಿದರು.

ಹಿರಿಯ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಸತ್ಯಮೂರ್ತಿ, ಬಸವರಾಜ ಮೂಲಗೆ, ಶಾಂತಲಾ ಮೈಲೂರಕರ್, ಬಸಯ್ಯ ಸ್ವಾಮಿ, ಪರಮೇಶ್ವರ ಬಿರಾದರ, ಎಸ್.ಎಂ. ಬಿರಾದಾರ, ರವಿಮೂರ್ತಿ, ಪ್ರೋ. ಶಾಂತಕುಮಾರ ಪಾಟೀಲ, ನರೇಂದ್ರ ಹಳ್ಳದಕೇರಿ ಇದ್ದರು.

ಕದಂಬ ಕನ್ನಡ ಸಂಘದ ಅಧ್ಯಕ್ಷ ಪ್ರೊ. ವೀರಶೆಟ್ಟಿ ಮೈಲೂರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಶೆಟ್ಟಿ ಖಾನಾಪುರೆ ನಿರೂಪಿಸಿದರು. ಉಮಾಕಾಂತ ಮೀಸೆ ಸ್ವಾಗತಿಸಿದರು. ಭುವನೇಶ್ವರ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.