ADVERTISEMENT

ಸುಡುಗಾಡು ಸಿದ್ದರಿಗೆ ನಿವೇಶನ: ಭರವಸೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 7:50 IST
Last Updated 17 ಅಕ್ಟೋಬರ್ 2012, 7:50 IST

ಶಹಾಬಾದ: ಪಟ್ಟಣದ ಹೊರವಲಯದ ಬೀರಪ್ಪನ ಬೆಟ್ಟ ಹಾಗೂ ಹರಳಯ್ಯ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿರುವ ಸುಡುಗಾಡು ಸಿದ್ದ ಜನಾಂಗದ ಸುಮಾರು 20 ಕ್ಕೂ ಹೆಚ್ಚು ಕುಟುಂಬಗಳಿಗೆ ಇನ್ನೆರಡು ದಿನಗಳಲ್ಲಿ ನಿವೇಶನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ತಹಶೀಲ್ದಾರ ಡಿ.ಬಾಲರಾಜ್ ಆಶ್ವಾಸನೆ ನೀಡಿದರು.

ಇಲ್ಲಿನ ಹರಳಯ್ಯ ನಗರ ಹಾಗೂ ಹೌಸಿಂಗ್ ಕಾಲನಿಯ ಹತ್ತಾರು ಗುಡಿಸಲುಗಳಿಗೆ ಸೋಮವಾರ ಸಂಜೆ ಭೇಟಿ ನೀಡಿದ್ದ ಅವರು, `ಸುಮಾರು 20 ಕುಟುಂಬಗಳಿಗೆ ಒಂದೆರಡು ದಿನಗಳಲ್ಲಿ ಆಶ್ರಯ ಕಾಲನಿಯಲ್ಲಿ ನಿವೇಶನಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುವುದು.

ಅದಕ್ಕಾಗಿ ಅಗತ್ಯವಿರುವ ಪ್ರಕ್ರಿಯೆಯನ್ನು ನಗರಸಭೆ ಅಧಿಕಾರಿಗಳು ಮಾಡುತ್ತಾರೆ. ಬಹುತೇಕ ಜನರಿಗೆ ಬಿಪಿಎಲ್ ಕಾರ್ಡ್ ವಿತರಿಸುವ ವ್ಯವಸ್ಥೆ ಕೈಗೆತ್ತಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ~ ಎಂದು ತಿಳಿಸಿದರು. 

ಜನರ ಮುತ್ತಿಗೆ: ಶಾಂತನಗರ ಬಡಾವಣೆಯ ಹೊರವಲಯದ ಇಂದಿರಾ ನಗರಕ್ಕೆ(ರಾಮಗಢ) ತಹಶೀಲ್ದಾರರು ಭೇಟಿ ನೀಡುತ್ತಿದ್ದಂತೆಯೆ ಅಲ್ಲಿನ ನೂರಾರು ನಿವಾಸಿಗಳು ಮುತ್ತಿಗೆ ಹಾಕಿ `ತಮಗೆ ಮನೆ, ವಿದ್ಯುತ್, ಕುಡಿಯುವ ನೀರು, ಮಾಸಾಶನ, ರಸ್ತೆ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು~ ಎಂದು ಮೌಖಿಕವಾಗಿ ಮನವಿ ಸಲ್ಲಿಸಿದರು.  ಅವರ ಬೇಡಿಕೆಗೆ ಸ್ಪಂದಿಸಿದ ತಹಶೀಲ್ದಾರರು ಸಂಬಂಧಿಸಿದ ಇಲಾಖೆಗಳಿಗೆ ತಕ್ಷಣವೆ ಸೂಚನೆ ನೀಡುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.