ADVERTISEMENT

ಸುವರ್ಣ ಗ್ರಾಮ ಯೋಜನೆಗೆ ಅಲ್ಪ ಅನುದಾನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 9:00 IST
Last Updated 21 ಜನವರಿ 2012, 9:00 IST

ಬೀದರ್: ಸುವರ್ಣ ಗ್ರಾಮೋದಯ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಅಲ್ಪ ಅನುದಾನ ಮಾತ್ರ ಒದಗಿಸುತ್ತಿದೆ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಅಸಮಾಧಾನ ವ್ಯಕ್ತಪಡಿಸಿದರು.

ಬೀದರ್ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

 ಪ್ರಸಿದ್ಧ ಸಿದ್ಧೇಶ್ವರ ದೇವಸ್ಥಾನ ಇರುವ ಹೊನ್ನಿಕೇರಿ ಐತಿಹಾಸಿಕ ಗ್ರಾಮವಾಗಿದೆ. ಗ್ರಾಮದಲ್ಲಿ ಅಗತ್ಯ ಸೌಕರ್ಯ ಕಲ್ಪಿಸುವುದಕ್ಕಾಗಿ ಯೋಜನೆಯಡಿ ಕನಿಷ್ಠ 50 ಲಕ್ಷ ರೂಪಾಯಿ ಕಲ್ಪಿಸಬೇಕಿತ್ತು. ಆದರೆ, 23 ಲಕ್ಷ ರೂಪಾಯಿ ಮಾತ್ರ ಮಂಜೂರು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಸುವರ್ಣ ಗ್ರಾಮ ಯೋಜನೆಗೆ ಒಂದೇ ವರ್ಷದಲ್ಲಿ 27 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಮೂರುವರೆ ವರ್ಷ ಕಳೆದರೂ ಇಷ್ಟೊಂದು ಹಣ ನೀಡಿಲ್ಲ ಎಂದು ಟೀಕಿಸಿದರು.

ಗ್ರಾಮದಲ್ಲಿ 23 ಲಕ್ಷ ರೂಪಾಯಿಯ ಪೈಕಿ 10.91 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ, 4.5 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ಚರಂಡಿ ಹಾಗೂ 7.60 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಬೀದರ್ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹೀಗಾಗಿ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹೆಚ್ಚಿನ ಅನುದಾನ ಒದಗಿಸುವ ಅಗತ್ಯವಿದೆ. ಬೀದರ್ ದಕ್ಷಿಣ ಕ್ಷೇತ್ರದ 80 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಕ್ಕಾಗಿ ಸರ್ಕಾರಕ್ಕೆ 2 ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೇವಲ 8 ಲಕ್ಷ ರೂಪಾಯಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಅಲ್ಪ ಅನುದಾನದಲ್ಲಿ ಇಡೀ ಕ್ಷೇತ್ರದಲ್ಲಿರುವ ನೀರಿನ ಸಮಸ್ಯೆ ಬಗೆಹರಿಸುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಅಶೋಕ ಪಾಟೀಲ್, ಕಪಲಾಪುರ (ಎ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈಶ್ವರಿ ಮೈಲಾರೆ, ಅಭಿವೃದ್ಧಿ ಅಧಿಕಾರಿ ಲಕ್ಷ್ಮಿಬಾಯಿ, ಸದಸ್ಯರಾದ ವೈಜಿನಾಥ ದತ್ತಾತ್ತೆ, ಪರಶುರಾಮ ಸಿದ್ಧಗೊಂಡ, ಭೂಸೇನಾ ನಿಗಮದ ಅಧಿಕಾರಿ ಎಸ್.ಜಿ. ಪಾಟೀಲ್, ಕಾರ್ಯನಿರ್ವಾಹಕ ಎಂಜಿನಿಯರ್ ನಾಗಪ್ಪ, ಕರ್ನಾಟಕ ಟೈಗರ್ಸ್‌ ಹೋರಾಟ ಸಮಿತಿಯ ಅಧ್ಯಕ್ಷ ಅಲಿಖಾನ್ ಡಾನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.