ADVERTISEMENT

ಸೌಲಭ್ಯ ಕೊರತೆವಿದ್ದರೂ ಗುಣಾತ್ಮಕ ಬೋಧನೆ

ಶಶಿಕಾಂತ ಭಗೋಜಿ
Published 4 ಅಕ್ಟೋಬರ್ 2017, 5:40 IST
Last Updated 4 ಅಕ್ಟೋಬರ್ 2017, 5:40 IST
ಹುಮನಾಬಾದ್ ತಾಲ್ಲೂಕು ಹುಣಸಗೇರಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಶಾಲಾ ಪ್ರಾಂಗಣದಲ್ಲಿ ಆಡುತ್ತಿರುವುದು
ಹುಮನಾಬಾದ್ ತಾಲ್ಲೂಕು ಹುಣಸಗೇರಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಶಾಲಾ ಪ್ರಾಂಗಣದಲ್ಲಿ ಆಡುತ್ತಿರುವುದು   

ಹುಮನಾಬಾದ್: ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ಅಂತರದಲ್ಲಿನ ಕನಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹುಣಸಗೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ಕೊರತೆಗಳಿವೆ. ಅದರ ಮಧ್ಯೆಯೂ ಶಿಕ್ಷಕರು ಸತತ ಪರಿಶ್ರಮದಿಂದ ಗುಣಾತ್ಮಕ ಶಿಕ್ಷಣ ನೀಡುತ್ತಾರೆ. ಉತ್ತಮ ವಾತಾವರಣ ಕಾಯ್ದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

1 ರಿಂದ 8ನೇ ತರಗತಿಯವರೆಗಿನ ಈ ಶಾಲೆಯಲ್ಲಿ 217ಮಕ್ಕಳಿದ್ದಾರೆ. 6 ಹಳೆಯ ಮತ್ತು 6 ಹೊಸ ಕೋಣೆ ಸೇರಿ 12 ಕೋಣೆಗಳಿವೆ. ಮುಖ್ಯ ಶಿಕ್ಷಕರು ಸೇರಿ 8 ಸಿಬ್ಬಂದಿ ಇದ್ದಾರೆ. ಹಳೆಯ 6 ಕೋಣೆಗಳು ಶಿಥಿಲಾವಸ್ಥೆ ತಲುಪಿವೆ. 1ರಿಂದ3ನೇ ತರಗತಿಯವರೆಗಿನ ಮಕ್ಕಳಿಗೆ ಶಿಕ್ಷಕಿ ಸುರೇಖಾ ಮತ್ತು ಜಗಗೊಂಡ ನಲಿಕಲಿ ಪರಿಣಾಮಕಾರಿ ಬೋಧಿಸುತ್ತಾರೆ.

ಸಮಾಜ ವಿಜ್ಞಾನ ವಿಷಯವನ್ನು ಪಾರ್ವತಿ ಬಾಳೂರೆ ವಿಜ್ಞಾನ ಪರಿಕರ ಬಳಸಿ ಮಕ್ಕಳಿಗೆ ಬೋಧಿಸಿದರೆ, ಶಿಕ್ಷಕ ಸಂಜೀವರೆಡ್ಡಿ ಗಣಿತ ವಿಷಯ ಸರಳವಾಗಿ ಕಲಿಸುತ್ತಾರೆ. ಅದೇ ಕಾರಣಕ್ಕಾಗಿ 5ರಿಂದ 8ನೇ ತರಗತಿಯ ಶೇ 50ಕ್ಕೂ ಹೆಚ್ಚು ಮಕ್ಕಳು 30ವರೆಗೆ ಮಗ್ಗಿ ಹೇಳುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕಿ ಕನ್ಯಾಕುಮಾರಿ ಕ್ರೀಡೆ ಜೊತೆಗೆ ಯೋಗಾ ತರಬೇತಿ ನೀಡುತ್ತಾರೆ.

ADVERTISEMENT

ಶಿಕ್ಷಕ ರಾಜೇಂದ್ರ ಅವರು ಇಂಗ್ಲಿಷ್‌ ಪಾಠ ಬೋಧನೆ ಜೊತೆಗೆ ಸ್ಪೋಕನ್‌ ಇಂಗ್ಲೀಷ ಹೇಳಿ ಕೊಡುತ್ತಾರೆ. ವಿಶೇಷ ತರಬೇತಿ ಪಡೆದಿರುವ ರಫಿಯುದ್ದೀನ್ 6,7 ಮತ್ತು 8ನೇ ತರಗತಿ ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಹೇಳಿಕೊಡುತ್ತಾರೆ.

ಶುಕ್ರವಾರ ಸರಸ್ವತಿ ಪೂಜೆ, ಶನಿವಾರ ರಸಪ್ರಶ್ನೆ, ಗುರುವಾರ ನಿಬಂಧ ಸ್ಪರ್ಧೆ, ಪ್ರತಿನಿತ್ಯ ಕನ್ನಡ ಮತ್ತು ಇಂಗ್ಲಿಷ್‌ ದಿನ ಪತ್ರಿಕೆಯಲ್ಲಿನ ಪ್ರಮುಖ ಸುದ್ದಿಗಳ ಜೊತೆಗೆ ಸುಭಾಷಿತ ಕಡ್ಡಾಯವಾಗಿ ಹೇಳಿಸುತ್ತಾರೆ.

ಪ್ರತಿಭಾ ಕಾರಂಜಿ ಸ್ಪರ್ಧೆಯ ಕಂಠಪಾಠ ವಿಭಾಗದಲ್ಲಿ 3ನೇ ತರಗತಿಯ ಸುರೇಖಾ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದರು. ಕಳೆದ ವರ್ಷದ ಕಬ್ಬಡ್ಡಿ ಸ್ಪರ್ಧೆಯಲ್ಲಿ ಪೂಜಾ ಮತ್ತು ಸಂಗಡಿಗರ ತಂಡ ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿತ್ತು ಎಂದು ದೈಹಿಕ ಶಿಕ್ಷಣ ಶಿಕ್ಷಕಿ ಕನ್ಯಾಕುಮಾರಿ ಹೇಳುತ್ತಾರೆ.

ಶಾಲೆಗೆ ಕಾಂಪೌಂಡ ಇಲ್ಲದ್ದರಿಂದ ಕೆಲವರು ಶಾಲಾ ಅವಧಿ ನಂತರ ಪ್ರಾಂಗಣದಲ್ಲಿ ಕುಡಿತ, ಇಸ್ಪೀಟು ಆಡುವ ಮೂಲಕ ಹೊಲಸುಗೊಳಿಸುತ್ತಾರೆ. ಅದೆಷ್ಟೋ ಬಾರಿ ವಿದ್ಯಾರ್ಥಿಗಳ ಸಹಕಾರದಿಂದ ಮದ್ಯದ ಬಾಟ್ಲಿ ಬಿಸಾಡಿದ್ದೇವೆ. ಖಾಸಗಿ ವಾಹನಗಳು ಶಾಲಾ ಪ್ರಾಂಗಣದಲ್ಲಿ ನಿಲ್ಲಿಸುವುದರಿಂದ ಮಕ್ಕಳ ಆಟೋಟಕ್ಕೆ ತೊಂದರೆ ಆಗುತ್ತದೆ. ಈ ಎಲ್ಲ ಸಮಸ್ಯೆ ಬಗೆಹರಿದಲ್ಲಿ ಇನ್ನೂ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ ಎಂದು ಮುಖ್ಯಶಿಕ್ಷಕ ಅಶೋಕ ಸಾಳೆ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.