ADVERTISEMENT

ಹುಮನಾಬಾದ್‌ ಮಾದರಿ ಕ್ಷೇತ್ರಕ್ಕೆ ಪಣ

ಗಣಿ ಮತ್ತು ಭೂವಿಜ್ಞಾನ, ಮುಜರಾಯಿ ಸಚಿವ ರಾಜಶೇಖರ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 12:37 IST
Last Updated 10 ಜೂನ್ 2018, 12:37 IST

ಹುಮನಾಬಾದ್: 35 ವರ್ಷಗಳಿಂದ ರಾಜಕೀಯದಲ್ಲಿ ಪಳಗಿರುವ ರಾಜಶೇಖರ ಪಾಟೀಲ ಅವರು ಹುಮನಾಬಾದ್ ಕ್ಷೇತ್ರದಿಂದ ನಾಲ್ಕನೆಯ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಕಾರಣಕ್ಕಾಗಿ ಅವರಿಗೆ ರಾಜ್ಯದ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವೂ ಲಭಿಸಿದೆ.

ಹೈದರಾಬಾದ್‌ ಕರ್ನಾಟಕದಲ್ಲೇ ಅತಿ ಹೆಚ್ಚು ಮತಗಳನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ರಾಜಶೇಖರ ಪಾಟೀಲ ಅವರು ಮುಂದಿನ ಐದು ವರ್ಷಗಳ ಉದ್ದೇಶಿತ ಯೋಜನೆಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ಕ್ಷೇತ್ರದ ಜನ ನಿಮ್ಮ ಮೇಲೆ ವಿಶ್ವಾಸ ಇಟ್ಟು ನಾಲ್ಕನೇ ಬಾರಿಗೆ ಗೆಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ತಕ್ಷಣಕ್ಕೆ ಕೈಗೆತ್ತಿಕೊಳ್ಳುವ ಕೆಲಸಗಳು ಯಾವವು?

ADVERTISEMENT

ಹುಮನಾಬಾದ್‌ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಈಗಾಗಲೇ ಸಿಮೆಂಟ್‌ ಕಾಂಕ್ರಿಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ನನ್ನ ಆದ್ಯತೆ. ಜಲ ಮೂಲಗಳಿಂದಲೇ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಕಾರಣ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಕಾರ್ಯಕ್ರಮ ರೂಪಿಸುತ್ತೇನೆ. ಮೇಲ್ನೋಟಕ್ಕೆ ಯೋಜನೆ ಚಿಕ್ಕದಾಗಿ ಕಂಡರೂ ಜನರ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಲಿದೆ. ಪ್ರತಿಯೊಂದು ಗ್ರಾಮದಲ್ಲಿ ಶುದ್ಧ ನೀರಿನ ಘಟಕಗಳನ್ನು ಆರಂಭಿಸುತ್ತೇನೆ.

 ಕ್ಷೇತ್ರದ ಅಭಿವೃದ್ಧಿಗೆ ಹಾಕಿಕೊಂಡಿರುವ ಯೋಜನೆಗಳು ಯಾವವು?

ಕಾರಂಜಾ ಜಲಾಶಯದ ಹಿನ್ನೀರು ನುಗ್ಗಿ ಡಾಕುಳಗಿ ಸೇರಿ ಕೆಲ ಗ್ರಾಮಗಳ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅಪೂರ್ಣ ಸ್ಥಿತಿಯಲ್ಲಿ ಇರುವ ಕಾರಂಜಾ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ. ಕಾರಂಜಾ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಹೊಸ ಕಾರ್ಖಾನೆಗಳನ್ನು ಆರಂಭಿಸುವ ದಿಸೆಯಲ್ಲಿ ಬಂಡವಾಳ ಹೂಡಿಕೆದಾರರಿಗೆ ಆಹ್ವಾನ ನೀಡಲಾಗುವುದು. ಕಾರ್ಖಾನೆ ಆರಂಭವಾದರೆ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಹಳ್ಳಿಖೇಡ(ಬಿ) ಸಮೀಪದ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಆರ್ಥಿಕ ನೆರವು ಒದಗಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೇ ?

ಕಾರಂಜಾ ಯೋಜನೆಯ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸುವುದು ಬಿಟ್ಟರೆ ಕ್ಷೇತ್ರದಲ್ಲಿ ದೊಡ್ಡ ಸಮಸ್ಯೆಗಳು ಇಲ್ಲ. ಅಭಿವೃದ್ಧಿ ಕಾಮಗಾರಿಗಳ ಮೂಲಕ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತೇನೆ.

ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನಿಸಿದ್ದೇನೆ. ದೇವಸ್ಥಾನ, ಮಸೀದಿಗಳ ಜೀರ್ಣೋದ್ಧಾರಕ್ಕೆ ನೆರವು ನೀಡಿದ್ದೇನೆ. ಕ್ಷೇತ್ರದ ಜನರ ಬೇಕು, ಬೇಡಿಕೆಗಳಿಗೆ ಸ್ಪಂದಿಸಲಿದ್ದೇನೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆಯೇ?

ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಈ ವಿಷಯದಲ್ಲಿ ಯಾವುದೇ ಸಂದೇಹ ಬೇಡ. ಹೆಚ್ಚಿನ ಅನುದಾನ ತಂದು ಮಾದರಿ ಕ್ಷೇತ್ರವನ್ನಾಗಿ ಮಾಡುವ ಪಣ ತೊಟ್ಟಿದ್ದೇನೆ. ಕಾಂಗ್ರೆಸ್ ವರಿಷ್ಠರು ಹಾಗೂ ಮುಖ್ಯಮಂತ್ರಿ ಇದಕ್ಕೆ ಸಂಪೂರ್ಣ ಬೆಂಬಲ ನೀಡುವ ವಿಶ್ವಾಸ ಇದೆ.

ಹುಮನಾಬಾದ್‌ ಕ್ಷೇತ್ರದಲ್ಲಿ ಚಿಟಗುಪ್ಪ, ಹುಮನಾಬಾದ್ ಹಾಗೂ ಹಳ್ಳಿಖೇಡ(ಬಿ) ಮೂರು ಪುರಸಭೆಗಳು ಇವೆ. ಹಳ್ಳಿಖೇಡ(ಬಿ) ಪುರಸಭೆ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ. ಹಿರಿಯ ಅಧಿಕಾರಿಗಳ ಸಭೆ ಕರೆದು ಸಿಬ್ಬಂದಿ ನಿಯೋಜನೆ ಮಾಡಿ ಅಭಿವೃದ್ಧಿಯ ವೇಗ ಹೆಚ್ಚಿಸಲು ಪ್ರಯತ್ನಿಸುತ್ತೇನೆ.

ಹುಮನಾಬಾದ್ ಕೈಗಾರಿಕಾ ಪ್ರದೇಶದ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡುತ್ತೀರಿ?

ಮಾಣಿಕನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗಡವಂತಿ, ಮೋಳಕೇರಿ, ಮಾಣಿಕನಗರ ಮತ್ತು ಬಸವಂತಪುರ ಗ್ರಾಮಗಳ ಜನರು ಕೈಗಾರಿಕೆಗಳು ಹೊರ ಬಿಡುವ ರಾಸಾಯನಿಕ ತ್ಯಾಜ್ಯದಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವುದು ನನ್ನ ಗಮನದಲ್ಲಿ ಇದೆ. ಹಿಂದೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ  ಮಾಲಿನ್ಯ ನಿಯಂತ್ರಣ ಮಂಡಳಿಗೂ ಪತ್ರ ಬರೆದಿದ್ದೆ. ಸಚಿವನಾದ ಮೇಲೆ ನನ್ನ ಜವಾಬ್ದಾರಿ ಹೆಚ್ಚಿದೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಗ್ರಾಮಸ್ಥರು ಹಾಗೂ ಕೈಗಾರಿಕೋದ್ಯಮಿಗಳ ಪ್ರತ್ಯೇಕ ಸಭೆ ಕರೆದು ಸಮಾಲೋಚನೆ ನಡೆಸುತ್ತೇನೆ. ಒಟ್ಟಾರೆ ಗ್ರಾಮಸ್ಥರ ಹಿತ ಕಾಪಾಡಲು ಪ್ರಯತ್ನಿಸುತ್ತೇನೆ.

-ಶಶಿಕಾಂತ ಭಗೋಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.