ADVERTISEMENT

ಹುಲಸೂರ: ಬಸವೇಶ್ವರ ಕಟ್ಟೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 5:20 IST
Last Updated 11 ಅಕ್ಟೋಬರ್ 2012, 5:20 IST

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಹುಲಸೂರನಲ್ಲಿನ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ನಿರ್ಮಿಸಿದ್ದ ಬಸವೇಶ್ವರ ಕಟ್ಟೆಯನ್ನು ಬುಧವಾರ ರಾತ್ರಿ 8.30 ಗಂಟೆಗೆ ತಹಸೀಲ್ದಾರ ಶಿವರಾಜ ಹಲಬರ್ಗೆ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೆಲ ಯುವಕರು ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸ್‌ರು ಲಾಟಿ ತೋರಿಸಿ ಅವರನ್ನು ಚದುರಿಸಿದರು.

ನಾಲ್ಕು ದಿನಗಳ ಹಿಂದೆ ಇಲ್ಲಿ ಹೊಸದಾಗಿ ಸಿಮೆಂಟ್‌ನ ಚಿಕ್ಕ ಕಟ್ಟೆಯನ್ನು ನಿರ್ಮಿಸಿ ಅದರ ಮೇಲೆ ಬಸವಣ್ಣನವರ ಭಾವಚಿತ್ರ ಮತ್ತು ಧ್ವಜ ಕಟ್ಟಲಾಗಿತ್ತು. ಆದರೆ ಇಂದು ಬೆಳಿಗ್ಗೆ ಗ್ರಾಮಕ್ಕೆ ಭೇಟಿಕೊಟ್ಟ ತಹಸೀಲ್ದಾರರು ಕಟ್ಟೆಯನ್ನು ಕಾನೂನು ಬಾಹಿರವಾಗಿ ಲೋಕೋಪಯೋಗಿ ಇಲಾಖೆಯ ರಸ್ತೆ ಮಧ್ಯದಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಅದನ್ನು ತೆರೆವುಗೊಳಿಸಬೇಕು ಎಂದು ಗ್ರಾಮಸ್ಥರನ್ನು ಕರೆದು ಸೂಚಿಸಿದ್ದರು.

ಈ ಸಂದರ್ಭದಲ್ಲಿ ಕೆಲವರು ಇದಕ್ಕೆ ಸಹಮತಿ ವ್ಯಕ್ತಪಡಿಸಿದರೆ ಕೆಲ ಯುವಕರು ಕಟ್ಟೆಯನ್ನು ತೆರವುಗೊಳಿಸಬಾರದು ಎಂದು ಪಟ್ಟು ಹಿಡಿದರು. ಆದ್ದರಿಂದ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಆದರೂ ಗ್ರಾಮದ ಪ್ರಮುಖರು ಒಮ್ಮತದ ನಿರ್ಣಯ ತೆಗೆದುಕೊಂಡು ಕಟ್ಟೆಯನ್ನು ಗುರುಬಸವೇಶ್ವರ ಸಂಸ್ಥಾನ ಮಠದ ಅಂಗಡಿಗಳ ಜಾಗದ ಪಕ್ಕದಲ್ಲಿ ನಿರ್ಮಿಸಲು ನಿರ್ಣಯ ತೆಗೆದುಕೊಂಡರು.

ಮುಖಂಡರಾದ ಕಾಶಪ್ಪ ಪಾರಶೆಟ್ಟೆ, ಸುಧೀರ ಕಾಡಾದಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಬುರಾವ ಪಟ್ನೆ, ಶಾಂತಕುಮಾರ ಹಾರಕೂಡೆ, ಶ್ರೀರಾಮಸೇನೆ ಅಧ್ಯಕ್ಷ ಶಿವರಾಜ ಖೌಂಟೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಣಜೀತ್ ಗಾಯಕವಾಡ, ಜಬ್ಬಾರ ಸೌದಾಗರ, ರಾಜಕುಮಾರ ನಿಡೋದೆ, ಬಸವರಾಜ ಖೌಂಟೆ ಮುಂತಾದವರು ಉಪಸ್ಥಿತರಿದ್ದರು.

ಇದಲ್ಲದೆ ಈಗ ನಿರ್ಮಿಸಿರುವ ಕಟ್ಟೆಯನ್ನು ತಾವೇ ತೆರವುಗೊಳಿಸಬೇಕು. ಮುಂದೆ ನಿರ್ಮಿಸಲಾಗುವ ಕಟ್ಟೆಯ ಸ್ಥಳಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಭರವಸೆ ಕೊಡಬೇಕು ಎಂದು ತಹಸೀಲ್ದಾರರಿಗೆ ಕೇಳಿಕೊಂಡರು ಎನ್ನಲಾಗಿದೆ.

ಇದಾದ ನಂತರವೂ ರಾತ್ರಿವರೆಗೆ ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ಕಟ್ಟೆಗೆ ಯಾರೂ ಏನೂ ಮಾಡಲಿಲ್ಲ. ಆದರೆ ರಾತ್ರಿ ಪೊಲೀಸ್ ಬಿಗಿ ಬಂದೋಬಸ್ತ್ ಮಧ್ಯೆ ಅದನ್ನು ತೆರವುಗೊಳಿಸಲಾಯಿತು. ರಸ್ತೆ ಮಧ್ಯದಲ್ಲಿ ಪ್ರತಿಮೆ ಸ್ಥಾಪಿಸಬಾರದು ಎಂದು ಕೋರ್ಟ್ ಆದೇಶ ಇರುವ ಕಾರಣ ಮತ್ತು ಇಲ್ಲಿನ ಕಟ್ಟೆ ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರಿಂದ ಅದನ್ನು ತೆರವು ಮಾಡಲಾಯಿತು. ನಂತರ ಪರಿಸ್ಥಿತಿ ಶಾಂತವಾಗಿದೆ ಎಂದು ತಹಸೀಲ್ದಾರ ಶಿವರಾಜ ಹಲಬರ್ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.