ADVERTISEMENT

ಹೊನ್ನಳ್ಳಿ ಬಾಲಕನ ಸಾಧನೆಗೆ ಲೆಫ್ಟಿನೆಂಟ್ ಗೌರವ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 11:01 IST
Last Updated 21 ಜೂನ್ 2013, 11:01 IST

ಭಾಲ್ಕಿ: ಸಾಧನೆಗೆ ಬಡತನ ಯಾವತ್ತೂ ಅಡ್ಡಿಯಾಗುವದಿಲ್ಲ. ಸತತ ಪರಿಶ್ರಮ, ಪಾಲಕರ ಪ್ರೋತ್ಸಾಹ ಮತ್ತು ಗುರು ಹಿರಿಯರ ಆಶಿರ್ವಾದದ ಫಲವಾಗಿ ನಾನಿಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಲು ಸಾಧ್ಯವಾಯ್ತು ಎಂದು ಭಾಲ್ಕಿ ತಾಲ್ಲೂಕಿನ ಹೊನ್ನಳ್ಳಿಯ ಸಂಗಮೇಶ ಬಿರಾದಾರ ಅಭಿಪ್ರಾಯಪಟ್ಟಿದ್ದಾರೆ.

ಬಾಲ್ಯದಿಂದಲೇ ಸಾಹಸಿ ಮತ್ತು ಪರಿಶ್ರಮಿಯಾಗಿರುವ ಸಂಗಮೇಶ ಪುಟ್ಟ ಹಳ್ಳಿಯಲ್ಲೇ 5ನೇ ವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ, 6ನೇ ವರ್ಗದಿಂದ 12ನೇ ವರೆಗೆ ಬಿಜಾಪುರದ ಸೈನಿಕ ಶಾಲೆಯಲ್ಲಿ ಓದಿದ್ದಾರೆ.

ನಂತರ ರಾಷ್ಟ್ರ ಮಟ್ಟದಲ್ಲಿ ನಡೆದ ಎನ್‌ಡಿಎ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ)ಗೆ ಆಯ್ಕೆಯಾಗಿ, ಡೆಹರಾಡೂನ್ ಮತ್ತು ಪೂನಾದಲ್ಲಿ ತರಬೇತಿ ಮುಗಿಸಿ ಈಗ  ಭಾರತೀಯ ಸೇನೆಯ ಲೆಫ್ಟಿನೆಂಟ್ ಹುದ್ದೆಗೆ ನೇಮಿಸಲಾಗಿದೆ.

ಬಡತನ ಅಡ್ಡಿಯಾಗಿಲ್ಲ: ಸಂಗಮೇಶ ಅವರ ತಂದೆ ಶಿವರಾಜ ಬಿರಾದಾರ ಭಾಲ್ಕಿಯ ಶಿವಾಜಿ ಕಾಲೇಜಿನಲ್ಲಿ ಸಹಾಯಕರಾಗಿದ್ದಾರೆ. ಅತ್ಯಂತ ಬಡತನವನ್ನು ಎದುರಿಸಿ ತನ್ನ 2 ಗಂಡು ಮಕ್ಕಳಿಗೆ ಸೈನಿಕ ಶಾಲೆಯಲ್ಲಿ ಅಭ್ಯಾಸ ಮಾಡಿಸಿದ್ದಾರೆ.

ಮಕ್ಕಳ ಸಾಧನೆಗೆ ಹರಕೆ ಹೊತ್ತು ಹಲವು ವರ್ಷಗಳ ವರೆಗೆ ಪಾದರಕ್ಷೆಯನ್ನೂ ಬಿಟ್ಟಿದ್ದರು. ಸರಳ ವ್ಯಕ್ತಿತ್ವ, ಸದ್ವಿಚಾರವುಳ್ಳ ಪಾಲಕರ ಆಶಿರ್ವಾದವೇ ನನ್ನ ಸಾಧನೆಯ ಶಕ್ತಿಯ ಮೂಲವಾಗಿದೆ ಎಂದು ಸಂಗಮೇಶ `ಪ್ರಜಾವಾಣಿ'ಗೆ ದೂರವಾಣಿ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರಕ್ಕಾಗಿ ಉದಾತ್ತ ಸೇವೆ ಸಲ್ಲಿಸುವ ಗುರಿ ಹೊಂದಿದ್ದೇನೆ. ಈ ದಾರಿಯಲ್ಲಿ ಸಾಗಲು ಮಾರ್ಗದರ್ಶನ ನೀಡಿದ ಸೈನಿಕ ಶಾಲೆಯ ಗುರುಗಳಿಗೂ, ಬಾಲ್ಯದ ಶಿಕ್ಷಕರಿಗೂ ಲೆಫ್ಟಿನೆಂಟ್ ಸಂಗಮೇಶ ಬಿರಾದಾರ ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.

ಅಭಿನಂದನೆ: ಹಳ್ಳಿಯ ಬಾಲಕ ಸಂಗಮೇಶನ ಸಾಧನೆಗೆ ಡಾ. ಬಸವಲಿಂಗ ಪಟ್ಟದ್ದೇವರು, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮೆಹಕರ್, ಕಿಸಾನ್ ಪ್ರಸಾರಕ ಮಂಡಳದ ಅಧ್ಯಕ್ಷ ಅನಿಲಕುಮಾರ ಸಿಂಧೆ, ಪತ್ರಕರ್ತ ಚಂದ್ರಕಾಂತ ಬಿರಾದಾರ, ಪ್ರೊ. ಎಸ್‌ಎಸ್ ಮೈನಾಳೆ, ಅಶೋಕ ರಾಜೋಳೆ, ಅಶೋಕ ಮೈನಾಳೆ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.