ADVERTISEMENT

ಹೋಟೆಲ್‌ನಲ್ಲಿ ₹ 85 ಸಾವಿರ ಪತ್ತೆ

ಶಾಸಕ ಅಶೋಕ ಖೇಣಿ ಮನೆಯಲ್ಲಿ 5 ವಿದೇಶಿ ಮದ್ಯದ ಬಾಟಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಮೇ 2018, 8:43 IST
Last Updated 12 ಮೇ 2018, 8:43 IST

ಬೀದರ್‌: ಜಿಲ್ಲಾ ಚುನಾವಣಾ ಅಧಿಕಾರಿ ನೇತೃತ್ವದ ತಂಡವು ನಗರದ ಸಪ್ನಾ ಇಂಟರ್‌ನ್ಯಾಷನಲ್‌ ಹೋಟೆಲ್‌ ಮೇಲೆ ಶುಕ್ರವಾರ ದಾಳಿ ನಡೆಸಿ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಖೇಣಿ ಸಂಬಂಧಿ ಎನ್ನಲಾದ ವ್ಯಕ್ತಿ ಉಳಿದುಕೊಂಡಿದ್ದ ಕೊಠಡಿಯಲ್ಲಿ ₹85 ಸಾವಿರ ನಗದು ವಶಪಡಿಸಿಕೊಂಡಿದೆ.

ಇದೇ ತಂಡ ಖೇಣಿ ಮನೆ ಮೇಲೂ ದಾಳಿ ನಡೆಸಿದಾಗ ಐದು ಬಾಟಲಿ ವಿದೇಶಿ ಮದ್ಯಗಳು ಸಿಕ್ಕಿವೆ. ‘ಮತದಾರರಿಗೆ ಹಂಚಲು ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಇಡಲಾಗಿದೆ ಎನ್ನುವ ಮಾಹಿತಿ ಬಂದ ತಕ್ಷಣ ಹೋಟೆಲ್‌ ಮೇಲೆ ದಾಳಿ ನಡೆಸಲಾಯಿತು. ಅಲ್ಲಿ ₹85 ಸಾವಿರ ನಗದು ಹಾಗೂ ಈಗಾಗಲೇ ₹93 ಸಾವಿರ ನಗದು ಹಂಚಿಕೆ ಮಾಡಿರುವ ಚೀಟಿ ಸಿಕ್ಕಿದೆ. ಹಣ ಸಂಗ್ರಹಿಸಿಟ್ಟುಕೊಂಡಿದ್ದ ವ್ಯಕ್ತಿಯು ಅಶೋಕ ಖೇಣಿ ಅವರ ದೂರದ ಸಂಬಂಧಿ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದ್ದಾರೆ.

ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಯಾವ ಗ್ರಾಮದಲ್ಲಿ ಎಷ್ಟು ಹಣ ಹಂಚಲಾಗಿದೆ ಎಂದು ಕೈಯಲ್ಲಿ ಬರೆದ ಚೀಟಿ ಸಿಕ್ಕಿದೆ. ಒಂದು ಚೀಟಿಯಲ್ಲಿ 26 ತಾಂಡಾಗಳ ಹೆಸರುಗಳಿವೆ. ಇನ್ನೊಂದು ಚೀಟಿಯಲ್ಲಿ ಕೆಲವು ಗ್ರಾಮಗಳ ಹೆಸರುಗಳನ್ನು ಉಲ್ಲೇಖಿಸಿ ಅವುಗಳ ಮುಂದೆ ವ್ಯಕ್ತಿಗಳ ಹೆಸರು, ಮೊಬೈಲ್‌ ಸಂಖ್ಯೆ ಹಾಗೂ ಅವರಿಗೆ ಕೊಟ್ಟಿರುವ ಹಣ ನಮೂದಿಸಲಾಗಿದೆ.

ADVERTISEMENT

‘ಒಬ್ಬ ವ್ಯಕ್ತಿ 2.2 ಲೀಟರ್‌ ಮದ್ಯ ಮಾತ್ರ ಮನೆಯಲ್ಲಿ ಇಟ್ಟುಕೊಳ್ಳಬಹುದು. ಖೇಣಿ ಅವರ ಮನೆಯಲ್ಲಿ ತಲಾ 750 ಎಂ.ಎಲ್‌ನ ಮದ್ಯದ ಐದು ಬಾಟಲಿಗಳು ದೊರೆತಿರುವುದರಿಂದ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅಬಕಾರಿ ಉಪ ಆಯುಕ್ತ ಶಿವಪ್ರಸಾದ ತಿಳಿಸಿದ್ದಾರೆ.

ಒಂದು ಪೈಸೆಯೂ ಸಿಕ್ಕಿಲ್ಲ: ‘ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಒಂದುಗೂಡಿವೆ. ಬಿಜೆಪಿಯವರು ನನ್ನ ಮನೆಯಲ್ಲಿ ₹ 5 ಕೋಟಿ ಇದೆ ಎಂದು ಚುನಾವಣಾ ಅಧಿಕಾರಿಗೆ ದೂರು ನೀಡಿದ್ದರು. ಆದರೆ, ನನ್ನ ಮನೆಯಲ್ಲಿ ಅಧಿಕಾರಿಗಳಿಗೆ ಒಂದು ಪೈಸೆಯೂ ಸಿಕ್ಕಿಲ್ಲ. ನನ್ನ ರಕ್ಷಣೆಗೆ ನಿಯೋಜಿಸಲಾಗಿರುವ ಅರೆ ಸೇನಾ ಪಡೆಯ ಸಿಬ್ಬಂದಿ ಬಳಿ ಇದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮದ್ಯಕ್ಕೂ ನನಗೂ ಸಂಬಂಧ ಇಲ್ಲ’ ಎಂದು ಅಶೋಕ ಖೇಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.