ADVERTISEMENT

ಹೋಳಿಹಬ್ಬ: ಬಣ್ಣ ಖರೀದಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 5:41 IST
Last Updated 17 ಮಾರ್ಚ್ 2014, 5:41 IST

ಬೀದರ್‌: ಬೆಲೆಯಲ್ಲಿ ಕೊಂಚ ಹೆಚ್ಚಳ ಆಗಿದ್ದರೂ ಬಣ್ಣಗಳ ಹಬ್ಬ ಹೋಳಿ ಆಚರಣೆಗಾಗಿ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಭಾನುವಾರ ಬಣ್ಣ ಹಾಗೂ ಬಣ್ಣ ಎರಚುವ ಸಾಮಗ್ರಿಗಳ ಖರೀದಿ ಭರಾಟೆ ಕಂಡು ಬಂದಿತು. ನಗರದಲ್ಲಿ ಭಾನುವಾರ ರಾತ್ರಿ ಕಾಮ­­ದಹನ ನಡೆದಿದ್ದು,  ಮಾ. 17ರ ಸೋಮವಾರ ಬಣ್ಣದಾಟದ ಸಂಭ್ರಮ ಇರಲಿದೆ. ಮಕ್ಕಳು, ಯುವಕರು ಹಾಗೂ ಹಿರಿಯರೂ ಈ ಸಂಭ್ರಮದಲ್ಲಿ ಭಾಗಿಯಾಗುವುದು ವಿಶೇಷ.

ಹೋಳಿ ಹಬ್ಬದ ಅಂಗವಾಗಿ ನಗರದ ಅಂಬೇಡ್ಕರ್‌ ವೃತ್ತ, ಹರಳಯ್ಯ ವೃತ್ತ, ಮಡಿವಾಳ ಮಾಚಿದೇವ ವೃತ್ತ, ಮೈಲೂರು ರಸ್ತೆ, ರಾಮಚೌಕ್‌, ಗುಂಪಾ ರಸ್ತೆ, ಚಿದ್ರಿ ರಸ್ತೆ, ಜನವಾಡ ರಸ್ತೆ ಸೇರಿದಂತೆ ವಿವಿಧೆಡೆ ಹತ್ತಾರು ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿವೆ. ಬಗೆ ಬಗೆಯ ಬಣ್ಣ, ಗುಲಾಲು, ವಿಭಿನ್ನ ಆಕಾರದ ಪಿಚಕಾರಿಗಳು ಗಮನ ಸೆಳೆಯುತ್ತಿವೆ.

ಕೇಸರಿ, ಹಳದಿ, ಹಸಿರು, ಗುಲಾಬಿ ಸೇರಿದಂತೆ ವಿವಿಧ ಬಣ್ಣಗಳ ಗುಲಾಲು ಮಾರುಕಟ್ಟೆಯಲ್ಲಿ ಇದೆ. ಇನ್ನು ಹಲವು ಬಗೆಯ ಬಣ್ಣ ಎರಚುವ ಪಿಚಕಾರಿಗಳೂ ಇವೆ. ಪಿಸ್ತೂಲ್‌ ಸೇರಿದಂತೆ ವಿವಿಧ ಗಾತ್ರದ ಪಿಚಕಾರಿಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ನಗರದ ವಿವಿಧೆಡೆ ತಾತ್ಕಾಲಿಕ ಅಂಗಡಿಗಳಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಪಿಚಕಾರಿ, ಬಣ್ಣ ಕೊಡಿಸುತ್ತಿದ್ದ ದೃಶ್ಯ ಕಂಡು ಬಂದವು.

₨30 ರಿಂದ ಹಿಡಿದು ₨180 ವರೆಗಿನ ಪಿಚಕಾರಿಗಳು ಮಾರುಕಟ್ಟೆಯಲ್ಲಿ ಇವೆ. ಬಣ್ಣ ಪ್ರತಿ 10 ಗ್ರಾಂ.ಗೆ ₨10, ₨15 ವರೆಗೆ ಇದೆ. ಗುಲಾಲು ಬೆಲೆ ಪ್ರತಿ ಕೆ.ಜಿ.ಗೆ ₨150ರಿಂದ ₨200 ಇದೆ. ಕಳೆದ ಬಾರಿಗೆ ಹೋಲಿಸಿದರೆ ಬೆಲೆಯಲ್ಲಿ ಶೇ 10 ರಿಂದ 20 ರಷ್ಟು ಹೆಚ್ಚಳ ಆಗಿದೆ. ಆದರೂ, ವ್ಯಾಪಾರ ಉತ್ತಮವಾಗಿದೆ ಎಂದು ತಿಳಿಸುತ್ತಾರೆ ವ್ಯಾಪಾರಿ ಸುರೇಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT