ADVERTISEMENT

‘ಟೇಬಲ್ ವರ್ಕ್ ಸಾಕು ಸಿದ್ಧತೆ ಆಗಲಿ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:20 IST
Last Updated 2 ಜನವರಿ 2014, 6:20 IST

ಬಸವಕಲ್ಯಾಣ: ‘ಉತ್ಸವಕ್ಕೆ ಇನ್ನು ಕೆಲ ದಿನ ಮಾತ್ರ ಬಾಕಿ ಉಳಿದಿದೆ. ಇಂಥದರಲ್ಲಿ ಬರೀ ಸಮಿತಿಗಳ ರಚನೆ, ಅದು ಇದು ಅಂತ ಕಾಲ ಕಳೆದರೆ ಹೇಗೆ, ಟೇಬಲ್ ವರ್ಕ್ ಇಂದಿನಿಂದಲೇ ನಿಲ್ಲಿಸಿ, ಫಟಾಫಟ್ ಸಿದ್ಧತೆ ಆರಂಭಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಸೂಚಿಸಿದರು.

ಇಲ್ಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಕಚೇರಿಯ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡ ಬಸವ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜ. 17 ರಿಂದ 19 ರವರೆಗೆ ಬಸವ ಉತ್ಸವ ಆಯೋಜಿಸಲಾಗುತ್ತದೆ. ಉತ್ಸವದ ಉದ್ಘಾಟನೆಗೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಮಾ­ರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಬೇಕು ಎಂಬ ಹಲವರ ಬೇಡಿಕೆಗೆ ಉತ್ತರಿಸಿದ ಅವರು, ‘ಆಯ್ತು ಕರೆಯೋಣ, ಇದರ ಬಗ್ಗೆ ವಾದ ವಿವಾದ ಬೇಡ’ ಎಂದರು.

ಬಸವ ಉತ್ಸವ ಎಂದರೆ ಸರ್ವ­ಜನೋತ್ಸವದಂತೆ ಇರಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಬಸವಣ್ಣ ಯಾವುದೇ ಜಾತಿಗೆ ಸೀಮಿತ ಅಲ್ಲ,  ತತ್ವ ಎಂದಾದರೂ ಜಾತಿಗೆ ಸೀಮಿತ ಆಗಿರುತ್ತದೆಯೇ’ ಎಂದರು. ‘ಇಲ್ಲಿ ಬರೀ ಬಸವ ಉತ್ಸವ ಹೇಗೆ ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ಕೊಡಿ, ವಾದ ವಿವಾದ ಸೃಷ್ಟಿಸಬೇಡಿ’ ಎಂದು ಸಚಿವರು ಮಧ್ಯೆ ಪ್ರವೇಶಿಸಿ ಮಾತನಾಡುತ್ತಿದ್ದವರನ್ನು ತಡೆದ ಪ್ರಸಂಗವೂ ನಡೆಯಿತು.

ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಮಾತನಾಡಿ, ಉತ್ಸವದಲ್ಲಿ ಕೃಷಿ ಮೇಳ, ಜಾನಪದ ಗಾಯನ, ವಚನ ವಿಚಾರ ಗೋಷ್ಠಿ, ಸರ್ವಧರ್ಮ ಸಮ್ಮೇಳನ, ವಸ್ತು ಪ್ರದರ್ಶನ, ಸ್ಮರಣ ಸಂಚಿಕೆ ಬಿಡುಗಡೆ ಮಾಡಲು ಯೋಜಿಸ­ಲಾಗಿದೆ. ಜಿಲ್ಲೆಯಲ್ಲಿನ ಕಲಾವಿದರಿಗೆ ಮತ್ತು ಸಂಗೀತಗಾರರಿಗೆ ಅವಕಾಶ ಕೊಡಲಾಗುವುದು. ದಾಸೋಹಕ್ಕೆ ಹಣ, ಧಾನ್ಯ ದೇಣಿಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಂತೋಷಮ್ಮ ಕೌಡ್ಯಾಳ್, ಉಪಾಧ್ಯಕ್ಷೆ ಲತಾ ಹಾರಕೂಡೆ, ಜಿಲ್ಲಾ ಪಂಚಾಯಿತಿ ಸಿಇಒ ಉಜ್ವಲಕುಮಾರ ಘೋಷ್್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತ್ಯಾಗರಾಜನ್, ಮಠಾಧೀಶರು, ವಿವಿಧ ಪಕ್ಷಗಳ ಮತ್ತು ಸಂಘ, ಸಂಸ್ಥೆಗಳ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.