ಹುಮನಾಬಾದ್: ಶೇ 100ರಷ್ಟು ಮತದಾನ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆ ಕೇಂದ್ರ ಬಳಿ ಚುನಾವಣಾ ಆಯೋಗದ ಆದೇಶದನ್ವಯ ಕುಡಿಯುವ ನೀರು ಮೊದಲಾದ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಆ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಬೀದರ್ ಲೋಕಸಭಾ ಚುನಾವಣೆ ವೀಕ್ಷಕ ರಾಜೀವ ಕೆ.ಜೈನ್ ತಿಳಿಸಿದರು.
ಇಲ್ಲಿನ ನೌಕರರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮತದಾನ ಜಾಗೃತಿ ಜಾಥಾ’ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ಪ್ರತಿಯೊಬ್ಬರ ಹಕ್ಕು. ಅದನ್ನು ಚಲಾಯಿಸುವುದು ಆದ್ಯ ಕರ್ತವ್ಯವಾಗಿದೆ. ಈ ವಿಷಯದಲ್ಲಿ ಅಧಿಕಾರಿ ಹಾಗೂ ಮತದಾರರು ತಮ್ಮ ಆದ್ಯ ಕರ್ತವ್ಯ ಎಂದು ಭಾವಿಸಿ, ಆಶೆ ಆಮಿಶೆಗೆ ಬಲಿಯಾಗದೇ ನಿರ್ಭಯ ಮತಚಲಾಯಿಸಿ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಹಕ್ಕಿನ ಶಕ್ತಿ ಏನೆಂಬುದನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.
ಮತದಾನ ಸಾಮಾಜಿಕ ಸಮಾನತೆ ಪ್ರತೀಕ. ಈ ಸಂಬಂಧ ಪ್ರತಿಯೊಬ್ಬ ಮತದಾರ ನೆರೆಹೊರೆಯವರನ್ನು ಮತದಾನಕ್ಕೆ ಕರೆತರಬೇಕು. ಈ ಜಾಗೃತಿ ಶಿಬಿರ ಪರಿಣಾಮ ಕಳೆದ ವಿಧಾನಸಭೆ ಚುನಾವಣೆ ಮತದಾನ ಗಣನೀಯ ಹೆಚ್ಚಳ ಕಂಡಿತ್ತು. ಈ ಬಾರಿ ಇಮ್ಮಡಿಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಸಹಾಯಕ ಆಯುಕ್ತೆ ಹೆಬ್ಸಿಬಾರಾಣಿ ಕುರ್ಲಾಪಾಟಿ ತಿಳಿಸಿದರು.
ಶೇ100 ಮತದಾನ ನಡೆಯಬೇಕೆಂಬ ಚುನಾವಣಾ ಆಯೋಗದ ಉದ್ದೇಶ ಸೂಕ್ತ. ಆದರೇ ಉಪಜೀವನ ಮೊದಲಾದ ಕಾರಣಗಳಿಗಾಗಿ ಶೇ 10ರಷ್ಟು ಜನ ಊರುಬಿಟ್ಟು ಹೋಗಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಶೇ 100 ಮತದಾನ ಹೇಗೆ ಸಾಧ್ಯ ಎಂದು ಅಂಗನವಾಡಿ ನೌಕರರ ಸಂಘದ ಮುಖ್ಯಸ್ಥೆ ಸುಮಿತ್ರಾಬಾಯಿ ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಉಜ್ವಲಕುಮಾರ ಘೋಷ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ನಾಗಪ್ಪ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರತ್ನಾ ಕುಲಕರ್ಣಿ, ಬಸವರಾಜ ವರವಟ್ಟಿ, ಡಾ.ಗೋವಿಂದಪ್ಪ, ಬದುಲಾದೇವಿ ಕುಲಕರ್ಣಿ, ಆಶಾದೇವಿ ಬಡದಾಳೆ ಮೊದಲಾದವರು ಇದ್ದರು. ಇದಕ್ಕೂ ಮುನ್ನ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಸರ್ಕಾರಿ ನೌಕರರ ಸಮುದಾಯ ಭವನದ ವರೆಗೆ ಜಾಥಾ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.