ADVERTISEMENT

‘ಸಫಲತೆಗೆ ಪರಿಶ್ರಮ ಅಗತ್ಯ’

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 6:29 IST
Last Updated 11 ಮಾರ್ಚ್ 2014, 6:29 IST

ಭಾಲ್ಕಿ: ಸತತ ಪರಿಶ್ರಮ ಮತ್ತು ನಿರಂತರ ಪ್ರಯತ್ನಗಳಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಚುನಾವಣಾ ಮುಖ್ಯಾಧಿಕಾರಿ ಪವನಕುಮಾರ ಮಾಲಪಾಟಿ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಿಂದಲೇ ದೊಡ್ಡ ಗುರಿ ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಸಿದ್ಧತೆಗಳನ್ನು ನಡೆಸಿದರೆ ಖಂಡಿತ ಯಶಸ್ಸು ನಮ್ಮದಾಗುತ್ತದೆ ಎಂದರು.

ಸಾನಿಧ್ಯ ವಹಿಸಿದ್ದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಜಿಲ್ಲೆಯ 120 ಸರ್ಕಾರಿ ಮತ್ತು ಖಾಸಗಿ ಪ್ರೌಢ ಶಾಲೆಗಳಲ್ಲಿ ಪ್ರತಿಭಾ ಪರೀಕ್ಷೆಗಳನ್ನು ನಡೆಸಿ ಒಂದೊಂದು ಶಾಲೆಯಿಂದ 5–10 ಮಕ್ಕಳಿಗೆ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ಮುಕ್ತ ಮನಸ್ಸು ಹೊಂದಿರಬೇಕು ಎಂದು ಪ್ರಾಚಾರ್ಯ ಬಸವರಾಜ ಮೋಳಕೆರೆ ತಿಳಿಸಿದರು.

ಜಿಲ್ಲಾಧಿಕಾರಿ ಮಾರ್ಗದರ್ಶನದಂತೆ ಜಿಲ್ಲೆಯ 120 ಶಾಲೆಗಳ 4ಸಾವಿರಕ್ಕೂ ಅಧಿಕ ಮಕ್ಕಳೊಂದಿಗೆ ಸತತ ಸಮಾಲೋಚನೆ ನಡೆಸುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಮಾಡಲಾಗಿದೆ ಎಂದು ಅಡಳಿತಾ­ಧಿಕಾರಿ ಮೋಹನರೆಡ್ಡಿ ಹೇಳಿದರು.

ಹಿರೇಮಠ ಸಂಸ್ಥಾನದ ಉತ್ತರಾಧಿಕಾರಿ ಗುರುಬಸವ ದೇವರು, ಸಂಸ್ಥೆಯ ಕಾರ್ಯದರ್ಶಿ ಮಹಾಲಿಂಗ ದೇವರು, ಬಸವಕಲ್ಯಾಣದ ವೈಜಿನಾಥ ಕಾಮಶೆಟ್ಟಿ, ಉಪನ್ಯಾಸಕ ಗುರುನಾಥ ಗಡ್ಡೆ, ಉದ್ಯಮಿ ಜಯರಾಜ ಖಂಡ್ರೆ, ವೆಂಕಟಪ್ಪ, ಮುಖಶಿಕ್ಷಕ ಲಕ್ಷ್ಮಣ ಮೇತ್ರೆ, ಬಸವರಾಜ ಪ್ರಭಾ ಇದ್ದರು.

ಮಧುಕರ್‌ ಗಾಂವಕರ್‌ ನಿರೂಪಿಸಿದರು. ಪ್ರವೀಣ ಖಂಡಾಳೆ ವಂದಿಸಿದರು. ಜಿಲ್ಲೆಯ ವಿವಿಧ ಶಾಲೆಗಳ 600 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.