ಬೀದರ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಗಾಗಿ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ 16 ಚೆಕ್‌ಪೋಸ್ಟ್‌ಗಳನ್ನು ಗುರುತಿಸಿದ್ದು, ಗಸ್ತು ಚುರುಕುಗೊಳಿಸಲು ನಿರ್ಧರಿಸಿದೆ.
ಆಯ್ದ ಕಡೆ ಈಗಾಗಲೇ ಗಸ್ತು ಚುರುಕುಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ ಆಧರಿಸಿ ಸುಗಮ ಚುನಾವಣೆಗಾಗಿ ಬಂದೊಬಸ್ತ್ ನಿಯೋಜಿಸಲು ನಿರ್ಧರಿಸಲಾಗಿದೆ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿ, ‘ಜಿಲ್ಲೆಯಲ್ಲಿ ಈಗಾಗಲೇ ಎರಡು ಮೀಸಲು ಪಡೆ ಪೊಲೀಸ್ ತುಕಡಿ ಇದೆ. ಇದರ ಜೊತೆಗೆ ಹೆಚ್ಚುವರಿ ಮೀಸಲು ಪಡೆಯನ್ನು ನಿರೀಕ್ಷಿಸಲಾಗಿದೆ’ ಎಂದರು.
ಜಿಲ್ಲಾ ಪೊಲೀಸ್ ಪಡೆ, ಕೆಎಸ್‌ಆರ್‌ಪಿ, ಡಿಎಆರ್, ಗೃಹರಕ್ಷಕ ದಳದ 350 ಮಂದಿ ಸೇರಿದಂತೆ ಸುಮಾರು 1,600 ಪೊಲೀಸ್ ಸಿಬ್ಬಂದಿ ಚುನಾವಣಾ ಸಂದರ್ಭದಲ್ಲಿ ಸೇವೆಗೆ ಲಭ್ಯರಿರುತ್ತಾರೆ ಎಂದು ತಿಳಿಸಿದರು.
ಪಿಸ್ತೂಲ್ ಹಾಜರಿಗೆ ಸೂಚನೆ: ಜಿಲ್ಲೆಯಲ್ಲಿ ಲೈಸೆನ್ಸ್ ಪಡೆದು ಬಳಸುತ್ತಿರುವ ಪಿಸ್ತೂಲ್‌ಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಹಾಜರು ಪಡಿಸಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ಬಹುತೇಕ ಬುಧವಾರದ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂದರು.
900 ಮಂದಿ ಗುರುತು: ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿಸಬಹುದು ಎಂದು ಸುಮಾರು 900 ಮಂದಿಯನ್ನು ಗುರುತಿಸಲಾಗಿದೆ. ಇವರಿಂದ ಯಾವುದೇ ಅಹಿತಕರ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಪತ್ರ, ಖಾತರಿ ಪಡೆಯಲಾಗುತ್ತಿದೆ. ಚುನಾವಣೆ ಅವಧಿಯಲ್ಲೂ ಈ ಎಲ್ಲರ ಮೇಲೂ ಇಲಾಖೆ ನಿಗಾ ವಹಿಸಲಿದೆ ಎಂದು ಹೇಳಿದರು.
ಮತದಾನ ಮಹತ್ವ– ಜಾಗೃತಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ಆಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣವನ್ನು ಶೇ 10 ರಿಂದ 15ರಷ್ಟು ಹೆಚ್ಚಿಸುವ ಗುರಿಯೊಂದಿಗೆ ಮತದಾನದ ಮಹತ್ವ ಕುರಿತ ಜಾಗೃತಿ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಗುರುವಾರ ಚಾಲನೆ ನೀಡಲಿದೆ.
ಸ್ವೀಪ್ ಹೆಸರಿನಲ್ಲಿ ನಡೆಯುವ ಜಾಗೃತಿ ಕಾರ್ಯಕ್ರಮಕ್ಕೆ ಮಾ. 13ರಂದು ಮಧ್ಯಾಹ್ನ 1 ಗಂಟೆಗೆ ಬಿ.ವಿ.ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಚಾಲನೆ ನೀಡುವರು.
ಮತದಾನದ ಪ್ರಮಾಣ ಹೆಚ್ಚಿಸುವುದು, ಅದರಲ್ಲೂ ಪ್ರಮುಖವಾಗಿ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಕೇಂದ್ರಗಳಲ್ಲಿ ಪ್ರಮಾಣ ಹೆಚ್ಚಿಸುವುದು, ಮಹಿಳೆಯರ ಮತದಾನದ ಪ್ರಮಾಣ ಹೆಚ್ಚಿಸುವುದು, ಮತದಾನದಿಂದ ಹೊರಗುಳಿದ ಸಮುದಾಯಗಳಿಗೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡುವುದು ಇದರ ಉದ್ದೇಶ ಎಂದು ಹೇಳಿಕೆ ತಿಳಿಸಿದೆ.
ಮಹಿಳೆ, ಯುವಕರು, ದುರ್ಬಲ ವರ್ಗ, ಅಂಗವಿಕಲರು, ಅಸಂಘಟಿತ ವಲಯದ ಕಾರ್ಮಿಕರು, ಕೊಳೆಗೇರಿ ಪ್ರದೇಶದಲ್ಲಿ ಇರುವವರು ಬಗ್ಗೆ ಈ ಕಾರ್ಯಕ್ರಮದಡಿ ಹೆಚ್ಚಿನ ಒತ್ತು ನೀಡಲಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, ವಿವಿಧ ಸ್ಪರ್ಧೆ ಹಾಗೂ ಜಾಥಾ ಅಯೋಜಿಸುವುದು; ವಿವಿಧ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು, ಕರಪತ್ರ, ಭಿತ್ತಿಪತ್ರ, ಕರಪತ್ರ ಹಾಕುವುದು ಮತ್ತಿತರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.