ಹುಮನಾಬಾದ್: ಜೂನ್ ಆರಂಭದಲ್ಲಿ 11ಉದ್ಯಾನಗಳ ಅಭಿವೃದ್ಧಿ ಕಾರ್ಯ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಮೀರಶುಕ್ಲಾ ತಿಳಿಸಿದರು.
ನಗರದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿ ಪರಿಶೀಲನೆ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.
ಪಟ್ಟಣದ ವಿವಿಧ ಬಡಾವಣೆ ವ್ಯಾಪ್ತಿಗೆ ಒಳಪಡುವ 6 ಉದ್ಯಾನ ಸ್ಥಳಗಳನ್ನು ಗುರುತಿಸಿ, ಈಗಾಗಲೇ ಸುತ್ತುಗೋಡೆ ನಿರ್ಮಿಸಲಾಗಿದೆ. ಬಾಕಿ ಉಳಿದ 5 ಉದ್ಯಾವನ ಸ್ಥಳಗಳಿಗೂ ಮೇ ಅಂತ್ಯದೊಳಗೆ ಸುತ್ತುಗೋಡೆ ನಿರ್ಮಿಸಿ, ಬಡಾವಣೆ ನಿವಾಸಿಗಳು ಕುಳಿತುಕೊಳ್ಳುವುದಕ್ಕೆ ಹುಲ್ಲಿನ ನೆಲಹಾಸಿಗೆ, ಹೂವಿನ ಗಿಡ ಮತ್ತು ಆಕರ್ಷಕ ಆಸನ ಅಳವಡಿಸುವುದಕ್ಕೆ ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಹಾಗೂ ಎಂಜಿನಿಯರ್‌ರಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಿರ್ಮಲ ನಗರ ಯೋಜನೆ ಅಡಿಯಲ್ಲಿ ಪಟ್ಟಣದ 3 ಸಾರ್ವಜನಿಕ ಸ್ಥಳಗಳಲ್ಲಿ ಹಣ ಪಾವತಿಸಿ ಬಳಕೆ ಮಾಡಿಕೊಳ್ಳುವ ವ್ಯವಸ್ಥೆ ಅಡಿ ಈಗಾಗಲೇ ಹಳೆ ತಹಶೀಲ್ದಾರ ಕಚೇರಿ, ಮಿನಿವಿಧಾನಸೌಧ ಪ್ರಾಂಗಣದಲ್ಲಿ ನಿರ್ಮಿಸಲು ತಲಾ ಒಂದರಂತೆ ಎರಡು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅಗತ್ಯತೆ ಆಧರಿಸಿ ನಗರದಲ್ಲಿ ಇನ್ನೊಂದು ಶೌಚಾಲಯ ನಿರ್ಮಿಸಲಾಗುತ್ತಿದೆ. ಮತ್ತು ಅದ್ಯತೆ ಮೇರೆಗೆ ಬಸ್ ಶೆಲ್ಟರ್, ಬಸ್ ತಂಗುದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆ ಪೈಕಿ ಈಗಾಗಲೇ ಕಲ್ಲೂರ ರಸ್ತೆಯಲ್ಲಿ ಒಂದು ತಂಗುದಾಣ ನಿರ್ಮಿಸಲಾಗಿದೆ. ಆದರೆ ಅದು ಅಷ್ಟು ಸೂಕ್ತವಾಗಿಲ್ಲ. ಅದನ್ನು ವಿನೂತನ ಮಾದರಿ ಮತ್ತು ಆಕರ್ಷಕ ರೀತಿಯಲ್ಲಿ ನಿರ್ಮಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಹೋಲಿ ನಂತರ ರಸ್ತೆ ಕಾಮಗಾರಿ: ಇಲ್ಲಿನ ಬಸವೇಶ್ವರ ವೃತ್ತದಿಂದ ವೀರಭದ್ರೇಶ್ವರ ದೇವಸ್ಥಾನ ಕ್ರಾಸ್ ಮತ್ತು ಶಿವಪೂರ ರೋಡ್, ಹಳೆ ಪುರಸಭೆವರೆಗಿನ ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ಶಿವಾಜಿ ವೃತ್ತದಿಂದ ಹಳೆ ಪುರಸಭೆವರೆಗಿನ ರಸ್ತೆಯನ್ನು ಹೋಳಿ ನಂತರ 10ರಿಂದ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಕಡಿಮೆ ಸ್ಟ್ರೆಂತ್‌ಗೆ ದಂಡ: ನಗರದ ವಿವಿಧೆಡೆ ಕೈಗೊಳ್ಳಲಾದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಸ್ಟ್ರೆಂತ್ 10 ಕ್ಕಿಂತ ಕಡಿಮೆ ಬಂದಲ್ಲಿ ಶೇ.15ರಿಂದ 25 ಪ್ರತಿಶತವರೆಗೆ ದಂಡ ವಿಧಿಸಲಾಗುವುದು. ಜಿಲ್ಲೆಯ ಔರಾದ್‌ನಲ್ಲಿ ಈ ರೀತಿ ದಂಡ ವಿಧಿಸಲಾದ ನಿದರ್ಶನಗಳಿವೆ ಎಂದರು.
ಸರ್ಕಾರಿ ಜಮೀನು ಒತ್ತುವರಿ ಮಾಡಿದವರಿಗೆ ನಿಯಮ ಪ್ರಕಾರ ಒಂದಲ್ಲ ಎರಡುಬಾರಿ ಸೂಚನೆ ಕಳುಹಿಸಿ, ಅದಕ್ಕೂ ಮೀರಿದರೆ ಪೊಲೀಸ್ ಭದ್ರತೆ ಪಡೆದು ಮುಲಾಜಿಲ್ಲದೇ ತೆರವುಗೊಳಿಸಿ ಎಂದರು.
ಕೋರ್ಟ್ ಮೆಟ್ಟಿಲಲ್ಲಿ ಇದ್ದ ಹಳೆ ಪುರಸಭೆ ಕಚೇರಿ ಖಟ್ಲೆ ಹೈಕೋರ್ಟ್‌ನಲ್ಲಿ ಇತ್ತು. ಕೋರ್ಟ್ ಆದೇಶದನ್ವಯ ಕಟ್ಟಡ ನೆಲಸಮಗೊಳಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ, ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಕಡಿಮೆ ಬಾಡಿಗೆಯಲ್ಲಿ ಮಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಜೊತೆಗೆ ಪುರಸಭೆ ವ್ಯಾಪ್ತಿಗೆ ಒಳಪಡುವ ವಾಟರ್ ಟ್ಯಾಂಕ್ ಪಕ್ಕದ ವಾಣಿಜ್ಯ ಸಂಕೀರ್ಣ ದುರಸ್ತಿಗೊಳಿಸಿ, ಹರಾಜು ಮಾಡಲಾಗುವುದು ಮತ್ತು ವಾಟರ್ ಟ್ಯಾಂಕ್ ಸುತ್ತಲೂ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಟ್ಯಾಂಕ್ ಸುತ್ತ ಸುತ್ತುಗೋಡೆ ನಿರ್ಮಿಸುವಂತೆ ಸ್ಥಳದಲ್ಲಿ ಇದ್ದ ಅಧಿಕಾರಿಗೆ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಿಂದ ಕಲ್ಲೂರ ರಸ್ತೆಯ ವಾಂಜ್ರಿ, ಶಿವಾಜಿ ವೃತ್ತ ಮೂಲಕ ಬಸವೇಶ್ವರ ಹಾಗೂ ಜವಾಹರ ರಸ್ತೆಗಳ ಕಾಮಗಾರಿ ಪರಿಶೀಲಿಸಿದರು. ಬಳಿಕ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿದರು. ಅಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪ ಕಾಮಗಾರಿ ವೀಕ್ಷಿಸಿ,
ಹರ್ಷ ವ್ಯಕ್ತಪಡಿಸಿದರು.
ಫಿಪ್ಟಿ- ಫಿಪ್ಟಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ಯಾ ಸರ್ಕಾರಿ ಪದವಿಪೂರ್ವ ಕಾಲೇಜು ನಿವೇಶನ ಸಂಬಂಧ ಇಬ್ಬರ ಮಧ್ಯದ ಸಮಸ್ಯೆ ಆಲಿಸಿ, ಅಲ್ಲಿ ಇರುವ ಒಟ್ಟು ಎರಡು ಎಕರೆ ಜಮೀನಿನಲ್ಲಿ ಇಬ್ಬರು ನೆಲ ಮಾಳಿಗೆ ಮತ್ತು ಮೊದಲ ಮಹಡಿ ತಲಾ 10 ಕೋಣೆಗಳನ್ನು ನಿರ್ಮಿಸಿಕೊಂಡಲ್ಲಿ ಇಬ್ಬರಿಗೂ ಇಪ್ಪತ್ತು ಕೋಣೆ ಲಭ್ಯವಾಗುತ್ತವೆ.
ಸಮಸ್ಯೆಗೆ ಇಲ್ಲೇ ಪರಿಹಾರ ಇರುವಾಗ ವಿನಾ ಕಾರಣ ಗೊಂದಲಕ್ಕೆ ಸಿಲುಕಿಕೊಳ್ಳದೇ ಸಹೋದರತ್ವ ಭಾವದಿಂದ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಂಡು ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಉತ್ತಮ ಫಲಿತಾಂಶ ಮೂಲಕ ರಾಜ್ಯಕ್ಕೆ ಮಾದರಿ ಆಗಿ ತೋರಿಸಬೇಕು ಎಂದು ಬುದ್ಧಿವಾದ ಹೇಳುವ ಮೂಲಕ ಇಬ್ಬರ ಮಧ್ಯದ ಶೀತಲ ಸಮರಕ್ಕೆ ವಿರಾಮ ಹೇಳಿದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮತ್ತು ಬಿ.ಸಿ.ಎಂ ವತಿಯಿಂದ ನಿರ್ಮಿಸಲಾಗುತ್ತಿರುವ ವಸತಿ ನಿಲಯಗಳ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು.
ಹುಮನಾಬಾದ್‌ನಲ್ಲಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಎಲ್ಲವನ್ನೂ ಹೇಳುವ ಹಾಗಿಲ್ಲ. ಕೆಲಸವನ್ನು ಮಾಡಿ ತೋರಿಸಬೇಕಿದೆ ಎಂದಾಗ ಸುಮ್ಮನಿರದ ಸುದ್ದಿಗಾರರು ಏನದು ಅಂಥ ಅಭಿವೃದ್ಧಿ ಎಂಬ ಪ್ರಶ್ನೆಗೆ `ಓ ಅಂದರಕೀ ಬಾತ್ ಹೈ ಕೆಹೆನಾ ನಹಿ ಕರಕೇ ಬತಾನಾ ಹೈ~ ಎಂದು ಬೀದರ್‌ಗೆ ಮರಳಿದರು.
ಪ್ರವಾಸಿ ಮಂದಿರದಿಂದ ಅಧಿಕಾರಿ ಮತ್ತು ಪತ್ರಕರ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಬಸ್‌ನಲ್ಲಿ ನಗರ ಸಂಚಾರ ಮೂಲಕ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಸಮೀರ ಶುಕ್ಲಾ ನಡೆಸಿದ ಬಸ್ ಸಂಚಾರವನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.