ಬೀದರ್: ನಗರದ ಗಾಂಧಿ ಗಂಜ್ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿ ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.
ಬ್ಯಾಂಕ್ ಕಾಲೊನಿಯ ಕುಂದುಮತಿ ಶಂಕರರಾವ್ ಹಾಗೂ ಸಹೋದರಿಯರು ಫೆಬ್ರುವರಿ 24ರಂದು ಸಂಜೆ ಕುಂಬರವಾಡಾ ಕಮಾನ್‌ನಿಂದ ರಾಂಪುರೆ ಕಾಲೊನಿಯಲ್ಲಿರುವ ತಮ್ಮ ಮನೆಗೆ ಹೊರಟಿದ್ದ ವೇಳೆಯಲ್ಲಿ ದ್ವಿಚಕ್ರವಾಹನದ ಮೇಲೆ ಬಂದಿದ್ದ ಆರೋಪಿ, ಕುಂದುಮತಿ ಕೊರಳಲ್ಲಿದ್ದ ಮಾಂಗಲ್ಯಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ.
ಕುಂದುಮತಿ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ತನಿಖೆ ನಡೆಸಿ ಇರಾನಿಗಲ್ಲಿಯ ಶಬ್ಬೀರ್ ಹುಸೇನ್ ತನ್ವೀರ್ ಹುಸೇಸ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು. ಶಬ್ಬೀರ್ ಹುಸೇನ್ ಕದ್ದ ಚಿನ್ನದ ಸರವನ್ನು ಇರಾನಿಗಲ್ಲಿಯ ಹಾಸ್ಮಿ ಶರಾಫತ್ ಹುಸೇನ್ ಮೂಲಕ ಮಾರಾಟ ಮಾಡಿ ಹಣ ಹಂಚಿಕೊಳ್ಳಲು ಯತ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳಿಂದ ಎರಡೂವರೆ ತೊಲದ ಒಂದು ಹಾಗೂ ಎರಡು ತೊಲ ತೂಕದ ಇನ್ನೊಂದು ಮಾಂಗಲ್ಯಸರ ವಶಪಡಿಸಿಕೊಳ್ಳಲಾಗಿದೆ. ಸರಗಳ್ಳತನಕ್ಕೆ ಬಳಸಿದ್ದ ಸ್ಕೂಟಿ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಡಿವೈಎಸ್‌ಪಿ ಬಸವೇಶ್ವರ ಹೀರಾ ಮಾರ್ಗದರ್ಶನದಲ್ಲಿ ಮಾರ್ಕೆಟ್ ಸಿಪಿಐ ಮಲ್ಲಮ್ಮ ಚೌಬೆ, ಗಾಂಧಿಗಂಜ್ ಪೊಲೀಸ್ ಪಾಟೀಲ ಮಂಜನಗೌಡ ಪಾಟೀಲ, ಪಿಎಸ್‌ಐ ದಯಾನಂದ, ಎಎಸ್‌ಐ ವಿನಾಯಕ, ಸಿಬ್ಬಂದಿ ದಿಲೀಪಕುಮಾರ ಮುರ್ಕಿ, ವಿಜಯಕುಮಾರ, ನವೀನ್, ಸಂಜುಕುಮಾರ, ವಿಶ್ವನಾಥ, ರಾಜಕುಮಾರ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಗಾಂಧಿ ಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.