ADVERTISEMENT

ಒಂದೇ ದಿನ 23 ಮಂದಿಗೆ ಕೋವಿಡ್‌ ದೃಢ

ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆ ಆತಂಕ: ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 6:21 IST
Last Updated 8 ಜನವರಿ 2022, 6:21 IST
ಪ್ರಭು ಚವಾಣ್
ಪ್ರಭು ಚವಾಣ್   

ಬೀದರ್: ಕೋವಿಡ್‌ ಮೂರನೇ ಅಲೆ ತಡೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿ ಹೊಸ ವರ್ಷದ ಮೊದಲ ವಾರಾಂತ್ಯ ಜಿಲ್ಲೆಯಲ್ಲಿ 23 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ. ಇದು ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

ಬೀದರ್ ನಗರದ 13, ಭಾಲ್ಕಿಯ 7, ಹುಮನಾಬಾದ್ ಹಾಗೂ ಬಸವಕಲ್ಯಾಣದಲ್ಲಿ ತಲಾ ಒಬ್ಬರಿಗೆ ಕೋವಿಡ್‌ ದೃಢಪಟ್ಟಿದೆ. ವಿಜಯಪುರ ಜಿಲ್ಲೆಯ ಹಿಪ್ಪರಗಿಯಿಂದ ಬಂದ 36 ವರ್ಷದ ಮಹಿಳೆಗೂ ಕೋವಿಡ್‌ ತಗುಲಿದೆ. ಗುರುನಗರ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗುಲಿದೆ.

ಶುಕ್ರವಾರ ರಾತ್ರಿ 8 ಗಂಟೆಗೆ ಪೊಲೀಸರು ನಗರದೆಲ್ಲೆಡೆ ಸಂಚರಿಸಿ ವಾಣಿಜ್ಯ ಮಳಿಗೆ, ಐಸ್‌ಕ್ರೀಮ್‌ ಅಂಗಡಿ, ಬೇಕರಿ, ಕಿರಾಣಿ ಅಂಗಡಿಗಳನ್ನು ಬಂದ್‌ ಮಾಡಿಸಿದರು. ಕೆಲವರು ಪೊಲೀಸರು ಬರುವ ಮೊದಲೇ ಅಂಗಡಿಗಳನ್ನು ಬಂದ್‌ ಮಾಡಿ ಸಹಕರಿಸಿದರು.

ADVERTISEMENT

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ರೋಗಿಗಳ ಸಂಬಂಧಿಗಳಿಗೆ ತೊಂದರೆಯಾಗದಿರಲೆಂದು ಒಂದು ತಾಸು ಹೆಚ್ಚುವರಿ ಅವಕಾಶ ಕಲ್ಪಿಸಲಾಗಿತ್ತು. ಶನಿವಾರ ಹಾಗೂ ಭಾನುವಾರ ಹೋಟೆಲ್, ಖಾನಾವಳಿ ಹಾಗೂ ರೆಸ್ಟೋರಂಟ್‌ಗಳಲ್ಲಿ ಕುಳಿತು ಊಟ ಮಾಡಲು ಅವಕಾಶ ಇರುವುದಿಲ್ಲ. ಆದರೆ, ಪಾರ್ಸೆಲ್‌ ಒಯ್ಯಲು ಅವಕಾಶ ಮಾಡಿಕೊಡಲಾಗಿದೆ.

ಜಿಮ್‌, ಐಸ್‌ಕ್ರೀಮ್‌ ಪಾರ್ಲರ್ ಹಾಗೂ ಬೀನ್‌ಬೀಡಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿಲ್ಲ. ತರಕಾರಿ ಮಾರಾಟಕ್ಕೆ ನಿರ್ಬಂಧ ವಿಧಿಸಿಲ್ಲ. ಮಹಾರಾಷ್ಟ್ರದ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.

ಪ್ರವಾಸಿಗರ ಭೇಟಿಗೆ ನಿರ್ಬಂಧ

ಬೀದರ್‌: ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬೀದರ್‌ ಕೋಟೆ, ಅಷ್ಟೂರಿನ ಗೊಮ್ಮಟಗಳು ಸೇರಿದಂತೆ ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ.

‘ಶನಿವಾರ ಹಾಗೂ ಭಾನುವಾರ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಪ್ರವಾಸಿಗರು ಸಹಕರಿಸಬೇಕು’ ಎಂದು ಎಎಸ್‌ಐ ಸಹಾಯಕ ಸಂರಕ್ಷಣಾಧಿಕಾರಿ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸೈನಿಕ ಶಾಲೆ ಪರೀಕ್ಷೆ ರದ್ದಿಲ್ಲ

ಬೀದರ್‌: ಜನವರಿ 9ರಂದು 5ನೇ ತರಗತಿಯಲ್ಲಿ ಓದುವ ಮಕ್ಕಳಿಗೆ ಸೈನಿಕ ಶಾಲೆಯ ಪರೀಕ್ಷೆ ಯಥಾವತ್ತಾಗಿ ನಡೆಯಲಿದೆ. ಕೋವಿಡ್ ಕಾರಣ ವಾರಾಂತ್ಯ ಕರ್ಫ್ಯೂ ‌ಇದ್ದರೂ ನಿಗದಿತ ಸಮಯದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ತಿಳಿಸಿದ್ದಾರೆ.

ಪರೀಕ್ಷೆಗಳಿಗೆ ವಾರಾಂತ್ಯ ಕರ್ಫ್ಯೂ ಅನ್ವಯಿಸುವುದಿಲ್ಲ. ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

ಶುಕ್ರವಾರ ರಾತ್ರಿ ಕರ್ಫ್ಯೂ ಆರಂಭವಾಗಿದ್ದು, ಜನವರಿ 10ರ ಸೋಮವಾರ ಬೆಳಗಿನ 5 ಗಂಟೆಯ ವರೆಗೆ ಜಾರಿ ಇರಲಿದೆ. ಸೋಮವಾರದಿಂದ ಗುರುವಾರದವರೆಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ಕರ್ಫ್ಯೂ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ
ಸ್ಪಷ್ಟಪಡಿಸಿದ್ದಾರೆ.

ಮತ್ತೆ ಜ.14ರಂದು ರಾತ್ರಿ 8 ಗಂಟೆಗೆ ವಾರಾಂತ್ಯ ಕರ್ಫ್ಯೂ ಶುರುವಾಗಲಿದೆ. ಜ.17ರ ಬೆಳಗಿನ 5 ಗಂಟೆಯ ವರೆಗೆ ಜಾರಿ ಇರಲಿದೆ. ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್‌ ನಿಯಮ ಪಾಲನೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಬೇಕು. ತಮ್ಮ ಆರೋಗ್ಯದ ಕಾಳಜಿ ವಹಿಸುವ ಜತೆಗೆ ಬೇರೆಯವರ ಆರೋಗ್ಯದ ಬಗೆಗೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಬಸ್‌ ಸಂಚಾರಕ್ಕೆ ತೊಂದರೆ ಇಲ್ಲ. ಆದರೆ, ಕಡಿಮೆ ಪ್ರಮಾಣದಲ್ಲಿ ಬಸ್‌ಗಳು ಸಂಚರಿಸಲಿವೆ. ಮಹಾರಾಷ್ಟ್ರದಿಂದ ಬರುವ ಹಾಗೂ ಮಹಾರಾಷ್ಟ್ರಕ್ಕೆ ಹೋಗುವ ಪ್ರಯಾಣಿಕರಿಗೆ 72 ಗಂಟೆಗಳ ಆರ್‌ಟಿಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ.

ಗಡಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ

ಬೀದರ್‌: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳ ಸಿಬ್ಬಂದಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೂಚಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ತೆಲಂಗಾಣಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವುದು ಕಂಡು ಬಂದಿದೆ. ಆರೋಗ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಕಡ್ಡಾಯವಾಗಿ ದಿನದ 24 ಗಂಟೆಯೂ ಚೆಕ್‍ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸಬೇಕು. ಕೋವಿಡ್ ಪರೀಕ್ಷೆಯ ವರದಿಯನ್ನು ವೀಕ್ಷಿಸಿಯೇ ಜಿಲ್ಲೆಯೊಳಗೆ ಪ್ರವೇಶ ನೀಡಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋವಿಡ್ ನಿಯಂತ್ರಿಸಲು ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿಸಲಾಗಿದೆ. ಸಾರ್ವಜನಿಕರು ತಮ್ಮ ಸುರಕ್ಷತೆಯ ಹಿತದೃಷ್ಟಿಯಿಂದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.