ADVERTISEMENT

2.45 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 5:35 IST
Last Updated 4 ಫೆಬ್ರುವರಿ 2012, 5:35 IST

ಬೀದರ್: ಜಿಲ್ಲೆಯಲ್ಲಿ ಫೆಬ್ರುವರಿ 19ರಿಂದ 22 ರವರೆಗೆ ನಡೆಯಲಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 5 ವರ್ಷದ ಒಳಗಿನ 2 ಲಕ್ಷ 45 ಸಾವಿರದ 167 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.

ಪಲ್ಸ್ ಪೋಲಿಯೊ ಅಭಿಯಾನದ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಬೇಕು. ಪ್ರತಿಯೊಂದು ಮನೆಗೆ ಭೇಟಿ ನೀಡಿ ಲಸಿಕೆ ಹಾಕಿರುವುದನ್ನು ದೃಢಪಡಿಸಬೇಕು.

ಮನೆ ಭೇಟಿ ಸಂದರ್ಭದಲ್ಲಿ ಮಕ್ಕಳು ಮನೆಯಲ್ಲಿ ಇಲ್ಲದಿದ್ದರೆ ಅಂಥ ಮನೆಗಳನ್ನು ಎಕ್ಸ್ ಎಂದು ಗುರುತಿಸಬೇಕು. ಮುಂದಿನ ದಿನಗಳಲ್ಲಿ ಇಂಥ ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಿರುವುದನ್ನು ಖಾತರಿ ಪಡಿಸಬೇಕು. ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳನ್ನು ಗುರುತಿಸಿ ಲಸಿಕೆ ಹಾಕಬೇಕು. ನೆರೆ ರಾಜ್ಯಗಳಿಂದ ಬರುವ ಬಸ್‌ಗಳಲ್ಲಿರುವ ಮಕ್ಕಳಿಗೆ ಲಸಿಕೆ ಹಾಕಬೇಕು.
 
ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಪೋಲಿಯೊ ಲಸಿಕೆ ಕಾರ್ಯದಲ್ಲಿ ಪೊಲೀಸ್ ನೆರವನ್ನು ಒದಗಿಸಲಾಗುವುದು ಎಂದು ಹೇಳಿದರು.ಐದು ವರ್ಷಗಳ ಕಾಲ ನಿರಂತರವಾಗಿ ಪೋಲಿಯೊ ಲಸಿಕೆ ಹಾಕಬೇಕು. ಈ ಹಿಂದೆ ಲಸಿಕೆ ಹಾಕಿದ್ದರೂ, ಈ ಬಾರಿ ಕಡ್ಡಾಯವಾಗಿ ಹಾಕಿಸಬೇಕು.
 
ಲಸಿಕೆ ಸಮರ್ಪಕವಾಗಿ ಸೇವಿಸಿರುವ ಬಗ್ಗೆ ಸಂದೇಹ ಇದ್ದರೆ ಮತ್ತೆ ಪಡೆಯಬಹುದಾಗಿದೆ. ಐದು ವರ್ಷ ಕಳೆದ ಮಕ್ಕಳೂ ಪೋಲಿಯೊ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪೋಲಿಯೊ ಹಾಕಿಸಿದವರು ಅಭಿಯಾನದ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು. 

ಮೊದಲ ದಿನ ಬೂತ್‌ಗಳ ಮೂಲಕ ಲಸಿಕೆ ಹಾಕಲಾಗುವುದು. ಮೊದಲ ದಿನ ಸಾರ್ವಜನಿಕರು ತಮ್ಮ ಮಕ್ಕಳನ್ನು ಬೂತ್‌ಗಳಿಗೆ ಕರೆದುಕೊಂಡು ಬಂದು ಲಸಿಕೆ ಹಾಕಿಸಿಕೊಳ್ಳಬೇಕು. ಮುಂದಿನ ಮೂರು ದಿನಗಳ ಕಾಲ ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.