ADVERTISEMENT

ಬಸ್‌ ಸೌಲಭ್ಯ ಇಲ್ಲದೆ ಪರದಾಟ

ಬಸವರಾಜ ಎಸ್.ಪ್ರಭಾ
Published 16 ಜನವರಿ 2018, 8:54 IST
Last Updated 16 ಜನವರಿ 2018, 8:54 IST
ಭಾಲ್ಕಿ ತಾಲ್ಲೂಕಿನ ರುದನೂರ ತಾಂಡಾಕ್ಕೆ ಧನ್ನೂರ ಗ್ರಾಮದ ಮಾರ್ಗವಾಗಿ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು
ಭಾಲ್ಕಿ ತಾಲ್ಲೂಕಿನ ರುದನೂರ ತಾಂಡಾಕ್ಕೆ ಧನ್ನೂರ ಗ್ರಾಮದ ಮಾರ್ಗವಾಗಿ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು   

ಭಾಲ್ಕಿ: ಗ್ರಾಮಕ್ಕೆ ಬಸ್‌ ಸೌಲಭ್ಯ, ಲ್ಲೆಡೆ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ಸರ್ಕಾರಿ ಶಾಲೆಯ ಕಾಂಪೌಂಡ್‌ಗೆ ಗೇಟ್ ಇಲ್ಲ. ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಸೌಕರ್ಯ ಕೊರತೆಯಿಂದ ತಾಲ್ಲೂಕಿನ ರುದನೂರ ತಾಂಡಾದ ಜನ ತೊಂದರೆ ಅನುಭವಿಸುತ್ತಿದ್ದಾರೆ. ತಾಲ್ಲೂಕಿನಿಂದ ಮೂವತೈದು ಕಿ.ಮೀ ದೂರದಲ್ಲಿ ರುದನೂರ ತಾಂಡಾ ಇದೆ. 80 ಮನೆಗಳಿರುವ ಈ ಗ್ರಾಮ ಮಳಚಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.

ಗ್ರಾಮದದಲ್ಲಿ ಸಿಸಿ ರಸ್ತೆ, ವ್ಯವಸ್ಥಿತ ಚರಂಡಿ ಇಲ್ಲದ ಕಾರಣ ಜನರಿಗೆ ತೊಂದರೆ ಆಗುತ್ತಿದೆ. ಕೆಲವೆಡೆ ಚರಂಡಿ ಇರದೆ ಇರುವುದರಿಂದ ಮನೆಗಳ ಅಕ್ಕಪಕ್ಕ ಹೊಲಸು ನೀರು ಸಂಗ್ರಹಗೊಂಡು ದುರ್ವಾಸನೆ ಸೂಸುತ್ತಿದೆ.

ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಮನೆ–ಮನೆಗೆ ನೀರು ಸರಬರಾಜು ಮಾಡಲು ನಳಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ನೀರು ಸಂಗ್ರಹ ಟ್ಯಾಂಕ್‌ ನಿರ್ಮಿಸದೆ ಇರುವುದರಿಂದ ಇಲ್ಲಿಯವರೆಗೆ ನಳಗಳಲ್ಲಿ ಒಮ್ಮೆಯೂ ನೀರು ಹರಿದು ಬಂದಿಲ್ಲ ಎಂದು ಗ್ರಾಮಸ್ಥರಾದ ಇಂದ್ರಜೀತ್‌ ಜಾಧವ, ಮಿಥುನ ಜಾಧವ, ವಿಜಯಕುಮಾರ ಜಾಧವ ಅಳಲು ತೋಡಿಕೊಂಡರು.

ADVERTISEMENT

ಶಾಲೆ, ಕಾಲೇಜಿಗೆ ಗ್ರಾಮದಿಂದ ಸುಮಾರು 40 ವಿದ್ಯಾರ್ಥಿಗಳು ಬೀದರ್‌ಗೆ ತೆರಳುತ್ತಾರೆ. ಆದರೆ, ಗ್ರಾಮಕ್ಕೆ ಬಸ್‌ ಸೌಲಭ್ಯ ಇಲ್ಲ. ಪ್ರತಿನಿತ್ಯ ಸಾರ್ವಜನಿಕರು, ವಿದ್ಯಾರ್ಥಿಗಳು ಮೂರು ಕಿ.ಮೀ ದೂರದ ಹಾಲಹಳ್ಳಿ ಇಲ್ಲವೇ ಆಣದೂರ ಗ್ರಾಮದವರೆಗೆ ನಡೆದುಕೊಂಡು ಹೋಗಿ ಬೀದರ್‌, ಭಾಲ್ಕಿ ಬಸ್‌ ಹತ್ತಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು

ಇನ್ನು ಮೂವತೈದು ಕಿ.ಮೀ ದೂರದ ತಾಲ್ಲೂಕು ಕೇಂದ್ರಕ್ಕೆ ತೆರಳಲು ಇರುವ ಸಮೀಪದ ಧನ್ನೂರ ಗ್ರಾಮದ ಐದು ಕಿ.ಮೀ ಒಳರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಾಲ್ನಡಿಗೆಗೂ ಯೋಗ್ಯ ಇಲ್ಲದಂತಾಗಿದೆ. ಶಾಲೆಗೆ ಗೇಟ್‌ ಇಲ್ಲದಿರುವುದರಿಂದ ನಾಯಿ, ದನಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಶಾಲೆಯ ಶೌಚಾಲಯಗಳು ಹಾಳು ಬಿದ್ದಿವೆ. ಗ್ರಾಮದ ಹೆಚ್ಚಿನ ಜನರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಜಾಗೃತಿ ಕೊರತೆಯಿಂದ ಕೆಲವ
ರು ಮಾತ್ರ ಬಳಸುತ್ತಾರೆ. ಉಳಿದವರು ರಸ್ತೆ ಅಕ್ಕಪಕ್ಕದ ಸ್ಥಳಗಳನ್ನೇ ಶೌಚಾಲಯಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರು ಹೇಳಿದರು.

ಪ್ರತಿದಿನ ಎರಡು ಸಾರಿ ಬೀದರ್‌ನಿಂದ ಮೈಲಾರ ರಸ್ತೆ ಮಾರ್ಗವಾಗಿ ರುದನೂರ ಗ್ರಾಮಕ್ಕೆ ಬರುವ ಬಸ್‌ನ್ನು ಬೀದರ್‌–ಆಣದೂರ–ರುದನೂರ ತಾಂಡಾ, ರುದನೂರ–ಹಲಬರ್ಗಾ–ಭಾಲ್ಕಿ ಮಾರ್ಗವಾಗಿ ಓಡುವಂತೆ ನೋಡಿಕೊಂಡರೆ ಗ್ರಾಮಸ್ಥರಿಗೆ ನಿತ್ಯ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಕ್ಕೆ ತೆರಳಲು ಅನುಕೂಲ ಆಗುತ್ತದೆ. ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ ಧೋರಣೆಯಿಂದ ನಾವು ಮೂಲ ಸೌಕರ್ಯ ಕೊರತೆಗಳ ನಡುವೆಯೇ ಜೀವನ ಸಾಗಿಸಬೇಕಾಗಿದೆ. ಶೀಘ್ರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಯುವಕರು, ಕಾಲೇಜು ವಿದ್ಯಾರ್ಥಿಗಳು ಎಚ್ಚರಿಸಿದರು.

* * 

ಇಲ್ಲಿಯವರೆಗೆ ಗ್ರಾಮಕ್ಕೆ ಒಮ್ಮೆಯೂ ಬಸ್‌ ಬಂದಿಲ್ಲ. ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಇನ್ನಿಲ್ಲದ ತೊಂದರೆ ಆಗುತ್ತಿದೆ. ಶೀಘ್ರ ಬಸ್‌ ವ್ಯವಸ್ಥೆ ಆಗಬೇಕು.
ಸುನಿಲ್‌ ಜಾಧವ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.