ADVERTISEMENT

ವಚನ ಜ್ಯೋತಿ ಮನೆ, ಮನಗಳಲ್ಲಿ ಬೆಳಗಲಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 9:16 IST
Last Updated 30 ಜನವರಿ 2018, 9:16 IST
ವಚನ ವಿಜಯೋತ್ಸವದಲ್ಲಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರಿಗೆ ಅಕ್ಕನಾಗಲಾಂಬಿಕಾ ಪುರಸ್ಕಾರ ಪ್ರದಾನ ಮಾಡಲಾಯಿತು
ವಚನ ವಿಜಯೋತ್ಸವದಲ್ಲಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರಿಗೆ ಅಕ್ಕನಾಗಲಾಂಬಿಕಾ ಪುರಸ್ಕಾರ ಪ್ರದಾನ ಮಾಡಲಾಯಿತು   

ಬೀದರ್: ‘ಬಸವಾದಿ ಶರಣರ ವಚನಗಳ ಜ್ಯೋತಿ ಪ್ರತಿ ಮನೆ, ಮನಗಳಲ್ಲಿ ಬೆಳಗಬೇಕಿದೆ’ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಬಸವಗಿರಿಯಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ ವಚನ ವಿಜಯೋತ್ಸವ ಹಾಗೂ ಯುವ ಪ್ರೇರಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಚನ ಸಾಹಿತ್ಯದಲ್ಲಿನ ಮಾನವೀಯ ಮೌಲ್ಯಗಳ ಬಗೆಗೆ ಜಗತ್ತು ಅರಿಯುವಂತೆ ಮಾಡಬೇಕಿದೆ. ವಚನಗಳನ್ನು ರಕ್ಷಿಸಿ, ಪೋಷಿಸುವ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕಿದೆ’ ಎಂದು ಹೇಳಿದರು.

ADVERTISEMENT

‘ಮೂಲಸೌಕರ್ಯಗಳಿಲ್ಲದ ಕಾಲದಲ್ಲಿಯೇ ಶರಣರು ಬಾಯಿ ಮಾತು, ಗಾಯನ ಮೂಲಕ ವಚನ ಸಾಹಿತ್ಯವನ್ನು ಉಳಿಸಿಕೊಂಡು ಬಂದಿದ್ದರು. ವಚನ ಸಾಹಿತ್ಯವನ್ನು ಜಗತ್ತಿನಾದ್ಯಂತ ಪರಿಸರಿಸುವುದು ಸವಾಲಿನ ಕೆಲಸವೇನೂ ಅಲ್ಲ’ ಎಂದು ತಿಳಿಸಿದರು.

‘ಜಗತ್ತಿನ ಶ್ರೇಷ್ಠ ಸಂಪತ್ತು ಆಗಿರುವ ವಚನ ಸಾಹಿತ್ಯದ ಹಿರಿಮೆ 900 ವರ್ಷಗಳ ನಂತರವೂ ಕಡಿಮೆಯಾಗಿಲ್ಲ. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ
ಪ್ರಭು ದೇವರು ಸೇರಿದಂತೆ ಶರಣರು ಸ್ವಚ್ಛ ಹಾಗೂ ಸರಳ ಬದುಕು ನಡೆಸಿದ್ದರು. ಅಂತರಂಗದಲ್ಲಿ ದೇವರ ಸ್ಮರಣೆ ಮಾಡುತ್ತ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು’ ಎಂದು ಹೇಳಿದರು.

‘ವಚನಗಳಲ್ಲಿ ಶಿಕ್ಷಣ ಮೌಲ್ಯಗಳು’ ಕುರಿತು ಶಿಕ್ಷಣ ತಜ್ಞ ಡಾ.ಕೆ.ಇ. ರಾಧಾಕೃಷ್ಣ, ‘ಸಾರ್ಥಕ ಬದುಕು’ ಕುರಿತು ವ್ಯಕ್ತಿತ್ವ ವಿಕಸನ ತರಬೇತುದಾರ ಎಸ್.ಜಿ.ಪಾಟೀಲ ಉಪನ್ಯಾಸ ನೀಡಿದರು.

ಕಾರ್ಗಿಲ್ ಯುದ್ಧದಲ್ಲಿ ಹೋರಾಟ ನಡೆಸಿದ ಬೆಂಗಳೂರಿನ ಕ್ಯಾಪ್ಟನ್ ನವೀನ್ ನಾಗಪ್ಪ ಅವರಿಗೆ ₹ 21 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡ ಅಕ್ಕನಾಗಲಾಂಬಿಕಾ ಪುರಸ್ಕಾರ ಹಾಗೂ ಉತ್ತರ ಕರ್ನಾಟಕ ಮೊದಲ ಮಹಿಳಾ ಪೈಲಟ್ ವಿಜಯಪುರದ ಪ್ರೀತಿ ಸುಧೀರ ಬಿರಾದಾರ ಅವರಿಗೆ ವಿಶೇಷ ಪುರಸ್ಕಾರ ಪ್ರದಾನ ಮಾಡಲಾಯಿತು.

ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ನೇತೃತ್ವ ವಹಿಸಿದ್ದರು. ಡಾ. ಗಂಗಾಂಬಿಕೆ ಅಕ್ಕ, ಸ್ವಾಗತ ಸಮಿತಿ ಅಧ್ಯಕ್ಷೆ ನೀಲಮ್ಮ ರೂಗನ್, ಕೆ.ಆರ್.ಇ. ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರು, ಕರ್ನಾಟಕ ಔಷಧ ತಜ್ಞರ ಸಂಘದ ರಾಜ್ಯ ಅಧ್ಯಕ್ಷ ಬಿ.ಎಲ್. ದೇಸಾಯಿ, ಕರ್ನಾಟಕ ರಾಜ್ಯ ರೈತ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳೆಕಾಯಿ, ವೀರಣ್ಣ ಹಲಶೆಟ್ಟಿ, ಸಿ.ಎಸ್. ಪಾಟೀಲ, ದಾಸ್ ಸೂರ್ಯವಂಶಿ, ಶಿವಶಂಕರ ರಾಂಪುರೆ, ಗುಂಡಯ್ಯ ತೀರ್ಥ, ಸೋಮನಾಥ ರಾಜೇಶ್ವರೆ, ಬಸವರಾಜ ಲಿಂಗಶೆಟ್ಟರ್, ಶಿವಪ್ಪ ಜೂಜಾ, ಡಾ.ಸುಭಾಷ ಬಶೆಟ್ಟಿ, ಡಾ. ವಿಜಯಶ್ರೀ ಬಶೆಟ್ಟಿ ಉಪಸ್ಥಿತರಿದ್ದರು. ಪ್ರಕಾಶ ಮಠಪತಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಮೋಳಕೇರಿ ನಿರೂಪಿಸಿದರು.

* * 

ವಚನ ವಿಜಯೋತ್ಸವ ಮೂಲಕ ಅಕ್ಕ ಅನ್ನಪೂರ್ಣ ಹಾಗೂ ಗಂಗಾಂಬಿಕೆ ಅಕ್ಕ ಅವರು ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ
ಸಿದ್ದೇಶ್ವರ ಸ್ವಾಮೀಜಿ ವಿಜಯಪುರ ಜ್ಞಾನ ಯೋಗಾಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.