ADVERTISEMENT

6 ಕ್ಷೇತ್ರದಲ್ಲಿ ಬಿಎಸ್‌ಪಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 7:55 IST
Last Updated 14 ಆಗಸ್ಟ್ 2012, 7:55 IST

ಬೀದರ್: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಬೀದರ್ ಜಿಲ್ಲೆಯ ಎಲ್ಲ ಆರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪಕ್ಷದ ರಾಜ್ಯ ಉಸ್ತುವಾರಿ, ಉತ್ತರಪ್ರದೇಶದ ವಿಧಾನ ಪರಿಷತ್ ಸದಸ್ಯ ಡಾ. ಅಶೋಕ್ ಸಿದ್ಧಾರ್ಥ ತಿಳಿಸಿದರು.

ನಗರದ ಸಪ್ನಾ ಇಂಟರ್‌ನ್ಯಾಷನಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಪಕ್ಷದ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದೇಶದ ಸಂಪತ್ತು ಬಂಡವಾಳಶಾಹಿ ಹಾಗೂ ಮನುವಾದಿಗಳ ಪಾಲಾಗುತ್ತಿದೆ. ಬಹುಜನ ಸಮಾಜ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಈ ಅಸಮಾನತೆ ನಿವಾರಣೆ ಆಗಲಿದೆ. ಪಕ್ಷ ದೇಶದ ಸಂಪತ್ತಿನ ಪೈಕಿ ಶೇ 80 ರಷ್ಟು ಪಾಲು ಬಡವರು ಹಾಗೂ ನಿರ್ಲಕ್ಷಕ್ಕೆ ಒಳಗಾದ ಸಮುದಾಯಗಳಿಗೆ ದೊರಕಿಸಿಕೊಡಲು ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

ADVERTISEMENT

ಬಹುಜನ ಸಮಾಜ ಪಕ್ಷವನ್ನು ಅಧಿಕಾರಕ್ಕೆ ತರುವುದರಿಂದ ಸರ್ವರಿಗೂ ಸಮಪಾಲು ಮತ್ತು ಸಮಬಾಳು ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಪಕ್ಷದ ಜಿಲ್ಲಾ ಅಧ್ಯಕ್ಷ ಬಿ. ವಿಠಲ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ, ಜಿಲ್ಲಾ ಉಪಾಧ್ಯಕ್ಷ ದೇವಿದಾಸ್ ಸೂರ್ಯವಂಶಿ, ಪ್ರಧಾನ ಕಾರ್ಯದರ್ಶಿ ಜಿಲಾನಿ ಪಟೇಲ್, ಖಜಾಂಚಿ, ಭೀಮ ಸೂರ್ಯವಂಶಿ, ಕಚೇರಿ ಕಾರ್ಯದರ್ಶಿ ಎಸ್.ಕೆ. ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.