ADVERTISEMENT

ಬೀದರ್‌ ಜಿಲ್ಲೆಗೆ ಶೇ 65ರಷ್ಟು ಪಠ್ಯ ಪುಸ್ತಕ ಪೂರೈಕೆ

ಮೇ 29ರಿಂದ ಶಾಲೆಗಳು ಆರಂಭ; ಮೇ 26ರಿಂದ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಮೇ 2025, 5:22 IST
Last Updated 19 ಮೇ 2025, 5:22 IST
Pavitra Bhat
   Pavitra Bhat

ಬೀದರ್‌: ರಾಜ್ಯ ಸರ್ಕಾರವು 2025–26ನೇ ಶೈಕ್ಷಣಿಕ ಸಾಲಿನಲ್ಲಿ ಮೇ 29ರಿಂದ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು, ಅದಕ್ಕೆ ಪೂರಕವಾಗಿ ಭರದ ಸಿದ್ಧತೆಗಳು ಸಹ ಶುರುವಾಗಿದೆ.

ಬೀದರ್‌ ಜಿಲ್ಲೆಗೆ ಈಗಾಗಲೇ ಶೇ 65ರಷ್ಟು ಪಠ್ಯ ಪುಸ್ತಕಗಳು ಬಂದಿವೆ. ಇದರಲ್ಲಿ ಒಂದರಿಂದ ಹತ್ತನೇ ತರಗತಿಯ ಪಠ್ಯ ಪುಸ್ತಕಗಳು ಸೇರಿವೆ. ಎರಡ್ಮೂರು ದಿನಗಳಲ್ಲಿ ಮಿಕ್ಕುಳಿದ ಶೇ 35ರಷ್ಟು ಕೂಡ ಬರಲಿದೆ.

ಮೇ 29ರಂದು ಶಾಲಾ ಪ್ರಾರಂಭದ ಉತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನವೇ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಿಸಲು ನಿರ್ಧರಿಸಲಾಗಿದೆ. ಮೇ 25 ಅಥವಾ ಮೇ 26ರಿಂದ ಜಿಲ್ಲೆಯ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ADVERTISEMENT

ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಜವಾಬ್ದಾರಿ ವಹಿಸಲಾಗಿದ್ದು, ಮೇ 29ರೊಳಗೆ ಎಲ್ಲ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಮುಗಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಈಗಾಗಲೇ ಶಾಲೆಗಳ ರೂಟ್‌ ಮಾಡಿಕೊಂಡಿದ್ದು, ವಾಹನಗಳ ಮೂಲಕ ತಲುಪಿಸುವ ಕಾರ್ಯ ಮಾಡಲಾಗುತ್ತದೆ.

ಖಾಸಗಿಯವರಿಗೆ ಶುಲ್ಕ:

ಪಠ್ಯ ಪುಸ್ತಕಗಳನ್ನು ಸರ್ಕಾರದ ಎಲ್ಲ ಶಾಲೆಗಳಿಗೆ ತಲುಪಿಸಲಾಗುತ್ತದೆ. ಆಸಕ್ತ ಖಾಸಗಿ ಸಂಸ್ಥೆಗಳವರು ನಿಗದಿತ ಶುಲ್ಕ ಭರಿಸಿ, ಬೇಡಿಕೆ ಸಲ್ಲಿಸಿದರೆ ಅವರಿಗೂ ಪೂರೈಸಲಾಗುತ್ತದೆ. ಆಯಾ ಬ್ಲಾಕ್‌ ಹಂತದ ನೋಡಲ್‌ ಅಧಿಕಾರಿಗಳ ಬಳಿ ಖಾಸಗಿ ಶಾಲೆಗಳವರು ಖರೀದಿಸಬಹುದು. ರಾಜ್ಯ ಸರ್ಕಾರವು ಇದಕ್ಕಾಗಿ ಶುಲ್ಕ ನಿಗದಿಪಡಿಸಿದ್ದು, ಅದನ್ನು ಆನ್‌ಲೈನ್‌ ಭರಿಸಿ ಪಠ್ಯ ಪುಸ್ತಕಗಳನ್ನು ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.

ಪೋಷಕರ ವಿರೋಧ:

ಇನ್ನು, ಖಾಸಗಿ ಶಾಲಾ ಆಡಳಿತ ಮಂಡಳಿಯವರು ದಿಢೀರನೆ ಶೇ 15ರಿಂದ 20ರಷ್ಟು ಶುಲ್ಕ ಹೆಚ್ಚಿಸಿರುವುದಕ್ಕೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವು ಪೋಷಕರು ಆಯಾ ಶಾಲೆಗಳ ಆಡಳಿತ ಮಂಡಳಿಯವರಿಗೆ ಕರೆ ಮಾಡಿ, ವಿರೋಧ ದಾಖಲಿಸಿದ್ದಾರೆ.

‘ಖಾಸಗಿ ಶಾಲಾ ಆಡಳಿತ ಮಂಡಳಿಯವರು ಶುಲ್ಕ ಹೆಚ್ಚಿಸಿರುವುದನ್ನು ‘ಪ್ರಜಾವಾಣಿ’ಯಲ್ಲಿ ಗಮನಿಸಿದ್ದೇನೆ. ಪೋಷಕರು ಈ ಸಂಬಂಧ ಲಿಖಿತ ರೂಪದಲ್ಲಿ ದೂರು ಕೊಟ್ಟರೆ, ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿ, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಡಿಡಿಪಿಐ ಸಲೀಂ ಪಾಶಾ ಪ್ರತಿಕ್ರಿಯಿಸಿದ್ದಾರೆ.

ಕೆಲವು ಟೈಟಲ್‌ಗಳ ಪುಸ್ತಕಗಳು ಇನ್ನೂ ಬಂದಿಲ್ಲ. ಅವುಗಳು ಬಂದ ನಂತರ ಎಲ್ಲ ಟೈಟಲ್‌ಗಳ ಪುಸ್ತಕಗಳನ್ನು ಒಟ್ಟಿಗೆ ಶಾಲೆಗಳಿಗೆ ವಿತರಿಸಲಾಗುತ್ತದೆ.
ಸಲೀಂ ಪಾಶಾ, ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೀದರ್‌

ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ

ಬೀದರ್‌ ಜಿಲ್ಲೆಯಲ್ಲಿ ಒಟ್ಟು 257 ಸರ್ಕಾರಿ ಶಾಲೆಗಳಿವೆ. ಶಿಥಿಲಗೊಂಡಿರುವ ಕೊಠಡಿಗಳ ದುರಸ್ತಿ ಕಾರ್ಯ ಭರದಿಂದ ನಡೆದಿದೆ. 735 ಶಾಲಾ ಕೊಠಡಿಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ಗುರುತಿಸಲಾಗಿದ್ದು ಈ ಪೈಕಿ ಶೇ 50ರಷ್ಟು ದುರಸ್ತಿಗೊಳಿಸಲಾಗಿದೆ. ಇನ್ನುಳಿದವುಗಳ ದುರಸ್ತಿ ಕಾರ್ಯ ಕೂಡ ಪ್ರಗತಿಯಲ್ಲಿದೆ. ಆದರೆ ಮೇ 29ರಿಂದಲೇ ಶಾಲಾ ಪ್ರಾರಂಭದ ಉತ್ಸವ ನಡೆಯಲಿದ್ದು ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೆಲಸ ಪೂರ್ಣಗೊಳಿಸುವ ವಿಶ್ವಾಸ ಹೊಂದಿದೆ. ಶಾಲಾ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಮೇ 28ರೊಳಗೆ ಎಲ್ಲ ರೀತಿಯಿಂದಲೂ ಶಾಲೆಗಳನ್ನು ಸ್ವಚ್ಛಗೊಳಿಸಿ ಸಜ್ಜುಗೊಳಿಸುವಂತೆ ಆಯಾ ಶಾಲೆಗಳ ಮುಖ್ಯಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ‘ಶಾಲೆಗಳ ಕೊಠಡಿಗಳು ಶೌಚಾಲಯಗಳು ನೀರಿನ ಟ್ಯಾಂಕ್‌ ಸಂಪ್‌ ಸೇರಿದಂತೆ ಇಡೀ ಪರಿಸರ ಸ್ವಚ್ಛಗೊಳಿಸಬೇಕು. ಶಾಲಾ ಆರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಂಡು ಮೇ 29ರಂದು ಮಕ್ಕಳನ್ನು ಕರೆತರಲು ಸೂಚಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.