ADVERTISEMENT

ಇಷ್ಟಾರ್ಥ ಪೂರೈಸುವ ವೀರಮಹಾಂತೇಶ್ವರ

ಖಟಕಚಿಂಚೋಳಿ: ಶ್ರಾವಣ ಮಾಸದಲ್ಲಿ ಮಠದಲ್ಲಿ ವಿಶೇಷ ಪೂಜೆ, ಪ್ರವಚನ

ಗಿರಿರಾಜ ಎಸ್ ವಾಲೆ
Published 9 ಮೇ 2021, 6:39 IST
Last Updated 9 ಮೇ 2021, 6:39 IST
ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದ ವೀರಮಹಾಂತೇಶ್ವರ ಮಠ
ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದ ವೀರಮಹಾಂತೇಶ್ವರ ಮಠ   

ಖಟಕಚಿಂಚೋಳಿ: ಐತಿಹಾಸಿಕ ಮಹತ್ವ ಹೊಂದಿರುವ ಇಲ್ಲಿಯ ವೀರಮಹಾಂತೇಶ್ವರ ಮಠವು ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಅಲ್ಲದೇ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮಠವೆಂದು ಪ್ರಸಿದ್ಧಿ ಪಡೆದಿದೆ.

ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದ ‘ವೀರಮಹಾಂತೇಶ್ವರರು ದಿವ್ಯಜ್ಞಾನಿ ಹಾಗೂ ಪವಾಡ ಪುರುಷರಾಗಿದ್ದರು. ಅವರನ್ನು ಶ್ರದ್ಧಾ, ಭಕ್ತಿಯಿಂದ ನೆನೆದರೆ ಪ್ರತ್ಯಕ್ಷರಾಗಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾರೆ’ ಎಂಬ ನಂಬಿಕೆ ಭಕ್ತರದ್ದಾಗಿದೆ.

ಯುಗಾದಿ ಹಬ್ಬದ ದಿನದಂದು ವೀರಮಹಾಂತೇಶ್ವರರು ಮಠದಲ್ಲಿಯೇ ಜೀವಂತ ಐಕ್ಯವಾಗಿದ್ದಾರೆ ಎಂದು ಪ್ರತ್ಯಕ್ಷವಾಗಿ ಕಂಡಿದ್ದ ಹಿರಿಯರು ಹೇಳುತ್ತಾರೆ.

ADVERTISEMENT

ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಲ್ಲಿಯೂ ಮಠದ ಭಕ್ತರು ನೆಲೆಸಿದ್ದಾರೆ. ಯುಗಾದಿ ಹಬ್ಬದ ದಿನದಂದು ನಡೆಯುವ ಸ್ಮರಣೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ ಶ್ರದ್ಧಾ, ಭಕ್ತಿಯಿಂದ ತಮ್ಮ ಹರಕೆಗಳನ್ನು ಬೇಡಿಕೊಳ್ಳುತ್ತಾರೆ ಎಂದು ಗ್ರಾಮದ ನಿವಾಸಿ ರೇವಣಸಿದ್ದ ಜಾಡರ್ ಹೇಳುತ್ತಾರೆ.

ನಡೆ ನುಡಿ ಒಂದಾಗಿಸಿಕೊಂಡು ಬದುಕಿದ ಶರಣ ಜೀವಿಯಾಗಿದ್ದರು. ಅಲ್ಲದೇ ಇಷ್ಟಲಿಂಗ ಪೂಜೆಯ ಆರಾಧಕರಾಗಿದ್ದರು. ಮಹಾಶಿವರಾತ್ರಿ ದಿನದಂದು ಸಾವಿರಾರು ಭಕ್ತರಿಗೆ ಲಿಂಗ ದೀಕ್ಷೆಯನ್ನು ನೀಡುತ್ತಿದ್ದರು ಎಂದು ಗ್ರಾಮದ ಹಿರಿಯರಾದ ರಾಜಶೇಖರ ಚೀಲಶೆಟ್ಟಿ ಹೇಳುತ್ತಾರೆ.

ವೀರಮಹಾಂತೇಶ್ವರರ ನಂತರ ಮಠದ ಉತ್ತರಾಧಿಕಾರಿಯಾಗಿ ನಿಜಲಿಂಗಯ್ಯ ಸ್ವಾಮೀಜಿ, ಕರೀ ವೀರಂತಯ್ಯ ಸ್ವಾಮೀಜಿ, ಮಹಾಲಿಂಗಯ್ಯ ಸ್ವಾಮೀಜಿ ಉತ್ತರಾಧಿಕಾರಿಯಾಗಿದ್ದರು. ಸದ್ಯ ಅಲ್ಲೂರೆ ಪರಿವಾರದ ನೀಲಕಂಠ ಸ್ವಾಮೀಜಿ ಉತ್ತರಾಧಿಕಾರಿಯಾಗಿದ್ದಾರೆ. ಶ್ರಾವಣ ಮಾಸದಲ್ಲಿನೀಲಕಂಠ ಸ್ವಾಮೀಜಿ ವಿಶೇಷ ಪೂಜೆ ನಡೆಸಿ, ಪ್ರವಚನವನ್ನು ಹೇಳುತ್ತಾರೆ ಎಂದು ಮಠದ ಭಕ್ತ ಅಶೋಕ ಜಮಾನೆ ಹೇಳುತ್ತಾರೆ.

‘ಪ್ರತಿ ಸೋಮವಾರ ಮಠಕ್ಕೆ ಭಕ್ತರ ದಂಡೇ ಬರುತ್ತಿತ್ತು. ಆದರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಮಠಕ್ಕೆ ನಿಷೇಧ ಹೇರಿರುವುದರಿಂದ ಏನೋ ಕಳೆದುಕೊಂಡಂತಾಗಿತ್ತು. ಸದ್ಯ ಮಠಕ್ಕೆ ಕೆಲವೇ ಜನರಿಗೆ ಅವಕಾಶ ಕಲ್ಪಿಸುತ್ತಿರುವುದರಿಂದ ವೀರಮಹಾಂತೇಶ್ವರರ ದರ್ಶನ ಪಡೆದೆ. ಕಳೆದುಕೊಂಡಿದ್ದು ಸಿಕ್ಕಿದ ಭಾವನೆ ಉಂಟಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆನಂದ ರಟಕಲೆ ಸಂತಸ ವ್ಯಕ್ತಪಡಿಸಿದರು.

‘ಗುರುವೇ ಇಲ್ಲದಿದ್ದರೆ ಮನುಷ್ಯ ಪಶುವಿನಂತೆ ಬದುಕಬೇಕಾಗಿತ್ತು. ಆ ದಿಸೆಯಲ್ಲಿ ವೀರಮಹಾಂತೇಶ್ವರರು ಸಮಾಜದ ಸರ್ವ ವರ್ಗದ ಜನರಿಗೆಧಾರ್ಮಿಕ ಸಂಸ್ಕಾರ ನೀಡಿದ್ದಾರೆ. ಆ ಮೂಲಕ ಉತ್ತಮ ನಾಗರಿಕರನ್ನಾಗಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’ ಎಂದು ಗ್ರಾಮದ ಹಿರಿಯ ಜೀವಿ ಮಾಣಿಕ ಉಂಬರ್ಗೆ
ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.