ADVERTISEMENT

ಔರಾದ್ | ಮಕ್ಕಳ ಉತ್ಸಾಹ ಹೆಚ್ಚಿಸಿದ ಬೇಸಿಗೆ ಶಿಬಿರ

ಔರಾದ್‌ ತಾಲ್ಲೂಕಿನ ಎಕಲಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2024, 16:25 IST
Last Updated 13 ಮೇ 2024, 16:25 IST
ಔರಾದ್ ತಾಲ್ಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೇಸಿಗೆ ವಿಜ್ಞಾನ ಶಿಬಿರದಲ್ಲಿ ಮಕ್ಕಳು ವಿಜ್ಞಾನದ ಮಾದರಿ ತಯಾರಿಸಿದರು
ಔರಾದ್ ತಾಲ್ಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೇಸಿಗೆ ವಿಜ್ಞಾನ ಶಿಬಿರದಲ್ಲಿ ಮಕ್ಕಳು ವಿಜ್ಞಾನದ ಮಾದರಿ ತಯಾರಿಸಿದರು   

ಔರಾದ್: ಅಗಸ್ತ್ಯ ಫೌಂಡೇಶನ್ ಹಾಗೂ ಮಿನಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೇಸಿಗೆ ವಿಜ್ಞಾನ ಶಿಬಿರ ಮಕ್ಕಳ ಉತ್ಸಾಹ ಇಮ್ಮಡಿಗೊಳಿಸಿತು.

ಗ್ರಾಮೀಣ ಭಾಗದ ಮಕ್ಕಳ ಕೌಶಲಾಭಿವೃದ್ಧಿ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಮಾರ್ಚ್ 30ರಿಂದ ಒಂದು ತಿಂಗಳು ನಿತ್ಯ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ತನಕ ಶಿಬಿರ ನಡೆಸಲಾಗಿದೆ. ಎಕಲಾರ ಸೇರಿದಂತೆ ಸುತ್ತಲಿನ ಗ್ರಾಮಗಳ 5 ರಿಂದ 9ನೇ ತರಗತಿಯ 40 ವಿದ್ಯಾರ್ಥಿಗಳು ಶಿಬಿರದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಂಡರು ಎಂದು ವಿಜ್ಞಾನ ಶಿಕ್ಷಕ ಬಾಲಾಜಿ ಅಮರವಾಡಿ ತಿಳಿಸಿದ್ದಾರೆ.

ಎಂಜಿನಿಯರಿಂಗ್ ಆಧಾರಿತ ವಿಜ್ಞಾನ ಕಲಿಕೆ (ಇಬಿಎಲ್) ಎಂಬ ವಿನೂತನ ಪರಿಕಲ್ಪನೆ ಅಡಿ ವಿದ್ಯಾರ್ಥಿಗಳಿಗೆ ಆಟಗಳ ಮೂಲಕ ಕಲಿಕೆ, ಡಿಜಿಟಲ್ ಪ್ಲಾಟ್‍ಫಾರ್ಮ್ ಪಾಠ, ಸಂಪನ್ಮೂಲ ಬಳಸಿಕೊಳ್ಳುವ ಸಾಮರ್ಥ್ಯ, ಜ್ಞಾನ ಹಂಚಿಕೆಯ ಮೂಲಕ ಸ್ಥಳೀಯ ಉತ್ಪಾದನೆ ಸುಧಾರಿತ ಸಾಮರ್ಥ್ಯ ಅಭಿವೃದ್ಧಿಪಡಿಸುವ ವಿಧಾನ ಹೇಳಿಕೊಡಲಾಯಿತು.

ADVERTISEMENT

ಜೀವಶಾಸ್ತ್ರ, ರಸಾಯನಶಾಸ್ತ್ರ ಸೇರಿದಂತೆ ವಿಜ್ಞಾನದ 20ಕ್ಕೂ ಹೆಚ್ಚು ಮಾದರಿಗಳನ್ನು ಸ್ವತಃ ಮಕ್ಕಳೇ ತಯಾರಿಸಿದರು. ಇದರಿಂದ ಮುಂದೆ ಮಕ್ಕಳಿಗೆ ವಿಜ್ಞಾನ ಕಲಿಕೆ ಸುಲಭವಾಗಲಿದೆ ಎಂದು ಔರಾದ್ ಮಿನಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವೀರೇಶ ಪಾಂಚಾಳ ಹೇಳಿದರು.

ಮುಖ್ಯಶಿಕ್ಷಕ ಪ್ರಭು ಬಾಳೂರೆ, ಶಿಕ್ಷಕ ಜೈಸಿಂಗ್ ಠಾಕೂರ, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ, ರೂಪಾ ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳಿಗೆ ಪ್ರೇರಣೆ ನೀಡಿದರು.

ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಆಸಕ್ತಿ ಪಾಲಕರ ಮತ್ತು ಶಿಕ್ಷಕರ ಪ್ರೋತ್ಸಾಹ ಗ್ರಾಮಸ್ಥರ ಸಹಕಾರದಿಂದ ಒಂದು ತಿಂಗಳ ಕಾಲ ಬೇಸಿಗೆ ವಿಜ್ಞಾನ ಶಿಬಿರ ಯಶ್ವಿಯಾಗಿದೆ

- ವೀರೇಶ ಪಾಂಚಾಳ ವಿಜ್ಞಾನ ಕೇಂದ್ರದ ಮುಖ್ಯಸ್ಥ ಔರಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.