ADVERTISEMENT

ಕಾಮಗಾರಿ ಆರಂಭಿಸದ ಅಧಿಕಾರಿಗಳ ವಿರುದ್ಧ ಕ್ರಮ

ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 15:24 IST
Last Updated 21 ನವೆಂಬರ್ 2019, 15:24 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಕಾನ್ಫರೆನ್ಸ್ ಹಾಲ್‍ನಲ್ಲಿ ಗುರುವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಮಾತನಾಡಿದರು
ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಕಾನ್ಫರೆನ್ಸ್ ಹಾಲ್‍ನಲ್ಲಿ ಗುರುವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಮಾತನಾಡಿದರು   

ಬೀದರ್: ‘ಹಲವು ಬಾರಿ ಆದೇಶ ನೀಡಿದರೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಪದವಿ ಪೂರ್ವ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯಬೇಕಾಗಿರುವ ಕೆಲ ಕಾಮಗಾರಿಗಳನ್ನು ಈವರೆಗೂ ಆರಂಭಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಸೂಚನೆ ನೀಡಿದರು.

‘ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿಯ ಭೌತಿಕ ಹಾಗೂ ಆರ್ಥಿಕ ಪ್ರಗತಿಯ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಅಪ್‌ಲೋಡ್ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ಕೆಆರ್‍ಐಡಿಎಲ್ ಅಧಿಕಾರಿ ಮಾತನಾಡಿ, ‘ ಕೆಲವೊಂದು ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ, ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣಕ್ಕೆ ನಿವೇಶನ ಸಮಸ್ಯೆ ಎದುರಾಗಿದೆ. ಹೀಗಾಗಿ ಕಾಮಗಾರಿಗಳನ್ನು ಆರಂಭಿಸಲು ಸಾಧ್ಯವಾಗಿಲ್ಲ’ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.